ಕಸ್ತೂರಿ ರಂಗನ್ ವರದಿ ಕೇಂದ್ರಕ್ಕೆ ಬಿಟ್ಟ ವಿಷಯ: ಸಚಿವ ರೈ
ಮಂಗಳೂರು, ಮೇ 10: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಈಗಾಗಲೇ ರಾಜ್ಯ ಸರಕಾರ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ವಿರೋಧವನ್ನೂ ವ್ಯಕ್ತಪಡಿಸಲಾಗಿದೆ. ಇನ್ನು ವರದಿ ಕುರಿತಂತೆ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಷಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಅರಣ್ಯ ಸಚಿವರೂ ಆಗಿರುವ ಬಿ. ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮಳೆ ಕಡಿಮೆಯಾಗುವಲ್ಲಿ ಅರಣ್ಯ ನಾಶವೂ ಒಂದು ಕಾರಣ ಎಂಬ ಮಾತು ನಿಜ. ಹಾಗಾಗಿಯೇ ಅರಣ್ಯ ಇಲಾಖೆ ವತಿಯಿಂದ ಈ ವರ್ಷ ಬದುಕಲು ಯೋಗ್ಯವಾದ ಗಿಡಗಳನ್ನು ಸಿದ್ಧಪಡಿಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದಕ್ಕಾಗಿ 6 ಕೋಟಿ ಗಿಡಗಳನ್ನು ಈ ಬಾರಿ ನರ್ಸರಿಗಳ ಮೂಲಕ ಸಿದ್ಧಪಡಿಸಿ, ತಾಲೂಕಿನಿಂದ ಜಿಲ್ಲಾಮಟ್ಟದವರೆಗೆ ಸ್ಥಳವಿರುವಲ್ಲಿ ನೆಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅರಣ್ಯ ಒತ್ತುವರಿ ಕೂಡಾ ಒಂದು ಕಾರಣವೆಂದು ಹೇಳಲಾಗುತ್ತಿದೆ. ಆದರೆ ಡೆಹ್ರಾಡೂನ್‌ನ ಸಂಶೋಧನಾ ಕೇಂದ್ರದ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 28 ಸಾವಿರ ಹೆಕ್ಟೇರ್ ಅರಣ್ಯ ವ್ಯಾಪ್ತಿ ಹೆಚ್ಚಳವಾಗಿದೆ. ವನ್ಯಜೀವಿಗಳು ಕೂಡಾ ರಾಜ್ಯದಲ್ಲಿ ಅಧಿಕವಿದ್ದು, ಹುಲಿ ಮತ್ತು ಆನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿರುವುದು ಸಂತಸದ ವಿಷಯ ಎಂದವರು ಹೇಳಿದರು.
ಇತ್ತೀಚೆಗೆ ಸಚಿವ ಕಾಗೋಡು ತಿಮ್ಮಪ್ಪನವರು ಸಭೆಯೊಂದರಲ್ಲಿ ಅರಣ್ಯ ಒತ್ತುವರಿ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದ್ದಾರೆನ್ನಲಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಹಿರಿಯರಾದ ಕಾಗೋಡು ಅವರು ಯಾವ ಅರ್ಥ ಹಾಗೂ ಉದ್ದೇಶದಲ್ಲಿ ಆ ಮಾತುಗಳನ್ನು ಹೇಳಿದ್ದಾರೆಯೋ ಗೊತ್ತಿಲ್ಲ. ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.