ಆಟೋಗ್ರಾಫ್ ಪ್ಲೀಸ್...
ಕಾನ್ಪುರ, ಮೇ 11: ಈವರ್ಷದ ಮಾರ್ಚ್‌ನಲ್ಲಿ ಬಿಸಿಸಿಐ ಪ್ರಕಟಿಸಿರುವ ಆಟಗಾರರು ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಸುರೇಶ್ ರೈನಾ ಸ್ಥಾನ ಪಡೆಯದ ಪ್ರಮುಖ ಆಟಗಾರನಾಗಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಲಾಗಿರುವ 15 ಸದಸ್ಯರ ತಂಡದಲ್ಲೂ ರೈನಾರನ್ನು ಕಡೆಗಣಿಸಲಾಗಿತ್ತು. ಆದಾಗ್ಯೂ ಎಡಗೈ ಬ್ಯಾಟ್ಸ್‌ಮನ್ ಈಗಲೂ ಅಭಿಮಾನಿಗಳ ಪಾಲಿಗೆ ಅದರಲ್ಲೂ ಉತ್ತರಪ್ರದೇಶದಲ್ಲಿ ಸ್ಟಾರ್ ಆಟಗಾರನಾಗಿದ್ದಾರೆ.
ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ ನಡೆದಿದ್ದ ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರೈನಾರ ಅಭಿಮಾನಿಯೊಬ್ಬ ಎಲ್ಲ ಅಡೆತಡೆ ಹಾಗೂ ಭದ್ರತೆಯ ಬೇಲಿಯನ್ನು ದಾಟಿ ಬಂದು ತನ್ನ ಫೇವರಿಟ್ ಆಟಗಾರನನ್ನು ಭೇಟಿಯಾದರು. ಆಗ ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಅಧಿಕಾರಿಗಳು, ರೈನಾ ಹೆಸರಿರುವ 3 ನಂಬರ್‌ನ ಜರ್ಸಿಯನ್ನು ಧರಿಸಿದ್ದ ಹುಚ್ಚು ಅಭಿಮಾನಿಯನ್ನು ಮೈದಾನದಿಂದ ಕರೆದೊಯ್ದರು. ರೈನಾರ ಅಭಿಮಾನಿ ಮೈದಾನದಿಂದ ಹೊರ ಹೋಗುವ ಮೊದಲು ಮಂಡಿಯೂರಿ ಬಿಳಿ ಹಾಳೆಯಲ್ಲಿ ಆಟೋಗ್ರಾಫ್ ಬರೆಯುವಂತೆಯೂ ರೈನಾರನ್ನು ವಿನಂತಿಸಿಕೊಂಡಿದ್ದಾನೆ.
ಆಗ ಮಧ್ಯಪ್ರವೇಶಿಸಿದ ಅಂಪೈರ್‌ಗಳು ಹಾಗೂ ಕ್ರಿಕೆಟಿಗ ರೈನಾ ಅಭಿಮಾನಿಯನ್ನು ಮೈದಾನದಿಂದ ಹೊರ ಹೋಗುವಂತೆ ವಿನಂತಿಸಿಕೊಂಡರು. ಅಭಿಮಾನಿ ರೈನಾರ ಕೈ ಕುಲುಕಿ ಮೈದಾನದಿಂದ ಹೊರ ನಡೆದಿದ್ದರು.