×
Ad

ಬಾಂಬುಸ್ಫೋಟದಲ್ಲಿ ಗಾಯಗೊಂಡಿದ್ದ ಫುಟ್ಬಾಲ್ ಆಟಗಾರ ಸಂಪೂರ್ಣ ಚೇತರಿಕೆ, ತಂಡದ ತರಬೇತಿಯಲ್ಲಿ ಭಾಗಿ

Update: 2017-05-11 16:00 IST

ಬರ್ಲಿನ್, ಮೇ 11: ಸುಮಾರು ಒಂದು ತಿಂಗಳ ಹಿಂದೆ ಬೊರುಸ್ಸಿಯ ಡಾರ್ಟ್‌ಮಂಡ್ ಫುಟ್ಬಾಲ್ ತಂಡದ ಬಸ್ ಮೇಲೆ ಉಗ್ರರು ನಡೆಸಿದ್ದ ಬಾಂಬು ದಾಳಿಯಲ್ಲಿ ಮೊಣಕೈ ಮುರಿತಕ್ಕೆ ಒಳಗಾಗಿದ್ದ ಫುಟ್ಬಾಲ್ ಆಟಗಾರ ಮಾರ್ಕ್ ಬಾತ್ರಾ ಸಂಪೂರ್ಣ ಚೇತರಿಸಿಕೊಂಡಿದ್ದು, ಬುಧವಾರ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ.

‘‘ಬೊರುಸ್ಸಿಯ ಡಾರ್ಟ್‌ಮಂಡ್ ಟೀಮ್ ಬಸ್‌ನ ಮೇಲೆ ನಡೆದಿದ್ದ ಬಾಂಬು ದಾಳಿಯಲ್ಲಿ ಗಾಯಗೊಂಡಿದ್ದ ಸೆಂಟ್ರಲ್ ಡಿಫೆಂಡರ್ ಮಾರ್ಕ್ ಬಾತ್ರಾ ಬಲಗೈ ಮೊಣಕೈಗೆ ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಇದೀಗ ಅವರು 29 ದಿನಗಳ ಬಳಿಕ ತರಬೇತಿಗೆ ವಾಪಸಾಗಿದ್ದು, ಇದು ಎಲ್ಲರಿಗೂ ಸಿಹಿ ಸುದ್ದಿಯಾಗಿದೆ’’ ಎಂದು ಡಾರ್ಟ್‌ಮಂಡ್ ಕ್ಲಬ್ ಪ್ರಕಟನೆಯಲ್ಲಿ ತಿಳಿಸಿದೆ.

   ಎ.11 ರಂದು ಮೊನಾಕೊ ತಂಡದ ವಿರುದ್ಧ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾಗವಹಿಸಲು ತೆರಳುತ್ತಿದ್ದ ಡಾರ್ಟ್‌ಮಂಡ್ ತಂಡದ ಬಸ್‌ನ ಮೇಲೆ ನಡೆದಿದ್ದ ಉಗ್ರಗಾಮಿಗಳ ದಾಳಿಯಲ್ಲಿ ಬಸ್‌ನ ಗಾಜು ಸಿಡಿದು 26ರ ಹರೆಯದ ಸ್ಪೇನ್ ಆಟಗಾರ ಮಾರ್ಕ್ ಬಾತ್ರಾ ಗಾಯಗೊಂಡಿದ್ದರು.

ಭಯೋತ್ಪಾದಕರ ದಾಳಿಯಿಂದಾಗಿ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್ ಪಂದ್ಯ 24 ಗಂಟೆ ತಡವಾಗಿ ಆರಂಭವಾಗಿದ್ದು, ಆ ಪಂದ್ಯವನ್ನು ಆತಿಥೇಯ ಡಾರ್ಟ್‌ಮಂಡ ತಂಡ 3-2 ರಿಂದ ಸೋತಿತ್ತು.

ಬಾತ್ರಾ ಹಾಗೂ ಟರ್ಕಿಯ ಮಿಡ್ ಫೀಲ್ಡರ್ ನೂರಿ ಸಾಹಿನ್ ಡಾರ್ಟ್‌ಮಂಡ್ ತಂಡಕ್ಕೆ ವಾಪಸಾಗಿದ್ದಾರೆ. ಸಾಹಿನ್ ಎ.22 ರಂದು ಮಂಡಿನೋವಿಗೆ ಒಳಗಾಗಿದ್ದರು ಎಂದು ಕ್ಲಬ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News