ವಿಕಲ ಚೇತನರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನ : ಪಟೇಲ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ
ಸುಳ್ಯ, ಮೇ 11: ಸುಳ್ಯ ತಾಲೂಕಿನ ಆರಂತೋಡುನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಪಟೇಲ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಉದ್ಘಾಟನಾ ಸಮಾರಂಭವು ಟಸ್ಟ್ ಕಚೇರಿಯಲ್ಲಿ ಇತ್ತೀಚೆಗೆ ನೆರವೇರಿತು.
ಗ್ರಾಮೀಣ ಪರಿಸರದಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಸಮಾಜ ಸೇವೆಯ ಹಲವು ಗುರಿಯನ್ನಿಟ್ಟು ಕಾರ್ಯಾಚರಿಸಲಿವೆ. ಅದರಲ್ಲಿ ಮೊದಲಿಗೆ ವಿಕಲ ಚೇತನರ ಪಾಲನೆ ಹಾಗೂ ಅವರಿಗೆ ಸ್ವವಲಂಬಿ ಜೀವನವನ್ನು ಒದಗಿಸುವುದರೊಂದಿಗೆ ಟ್ರಸ್ಟ್ ತನ್ನ ಸಮಾಜ ಸೇವೆಯನ್ನು ಆರಂಭಿಸಲಿದೆ ಎಂದು ಪಟೇಲ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಚಯರ್ಮ್ಯಾನ್ ಬದ್ರುದ್ದೀನ್ ಪಟೇಲ್ ಟ್ರಸ್ಟಿನ ಧ್ಯೇಯೊದ್ದೇಶ ಹಾಗೂ ಅದರ ಕಾರ್ಯವೈಕರ್ಯವನ್ನು ವಿವರಿಸಿದರು.
ಟ್ರಸ್ಟ್ ನ ಪ್ರಧಾನ ಕಾರ್ಯಧರ್ಶಿ ಮುಕ್ತಾರ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಸೇವೆಗಳು ಇಂತಹ ಟ್ರಸ್ಟ್‌ಗಳಿಂದ ಸಾಧ್ಯವಿದೆ, ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ನೀಡುವುದೊಂದೇ ಗುರಿಯಾಗಬಾರದು. ಕೇವಲ ಹಣದಿಂದ ಯಾರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲದ ಈ ದಿನಗಳಲ್ಲಿ, ಜನರಿಗೆ ನಿಶ್ಚಿತ ಗುರಿಯ ಅರಿವು ಮೂಡಿಸುವುದರೊಂದಿಗೆ ಸಮಾಜಕ್ಕೆ ಉಪಯುಕ್ತವಾದ ತಿಳುವಳಿಕೆ ನೀಡುವ ವ್ಯವಸ್ಥೆಯಾಗಬೇಕು. ವ್ಯವಸ್ಥೆ ಒಗ್ಗೂಡಿಸುವುದೇ ಟ್ರಸ್ಟ್‌ಗಳು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು. ಅಂಗವಿಕಲರು ತಮ್ಮ ಕೀಳರಿಮೆ ಬದಿಗೊತ್ತಿ ತಮಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಮೂಲಕ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಂಡು ಇತರರಿಗೆ ಪ್ರೇರಣೆಯಾಗಬೇಕು, ಅಂಗವಿಕಲರ ಕಲ್ಯಾಣಕ್ಕಾಗಿ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿದ್ದು ಇಂತಹ ಕಾರ್ಯಕ್ರಮಗಳಿಗೆ ಪಟೇಲ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕೈ ಜೋಡಿಸಬೇಕಾಗಿದೆ ಎಂದರು.
ಉದ್ಯಮಿ ಹಾಗೂ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರಾದ ಹಾಜಿ ಅಹ್ಮದ್ ಕುಂಙಿ ಪಟೇಲ್ ಉದ್ಘಾಟಿಸಿ, ಟ್ರಸ್ಟ್ ನ ಪ್ರಥಮ ಹೆಜ್ಜೆಯನ್ನು ಶ್ಲಾಘಿಸಿದರು. ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಮತ್ತು ಶಿಕ್ಷಣ ನೀಡಿ ಅವರನ್ನು ಸಬಲೀಕರಣಗೊಳಿಸುವಲ್ಲಿ ಸಹಕಾರಿಯಾಗಬೇಕಿದೆ ಎಂದರು.
ಆರಂತೋಡು ಜುಮಾ ಮಸೀದಿ ಆಧ್ಯಕ್ಷರು ಹಾಗೂ ಪಟೇಲ್ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯ ಮುಹಮ್ಮದ್ ಕುಂಙಿ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್ ಪಟೇಲ್, ಅಬ್ದುಲ್ ರಹ್ಮಾನ್ ಪಟೇಲ್, ಅಬ್ದುಲ್ಲಾ ಶರೀಫ್ ಪಟೇಲ್ ಹಾಗೂ ಟ್ರಸ್ಟ್ ನ ಸದಸ್ಯರಾದ ಸರ್ಫ್ರಾಝ್ ಪಟೇಲ್, ಸೈಫುದೀನ್ ಪಟೇಲ್, ಅನ್ವರ್ ಪಟೇಲ್ ಉಪಸ್ಥಿತರಿದ್ದರು. ಟ್ರಸ್ಟ್ ಕೋಶಾಧಿಕಾರಿ ನಾಸಿರುದ್ದೀನ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಸಿಂಸಾರ್ ಪಟೇಲ್ ವಂದಿಸಿದರು.