ಶೇ.35ರಷ್ಟು ಜನರಿಗೆ ಔಷಧಗಳಿಂದಲೇ ರೋಗ !
ಆಲಪ್ಪುಝ,ಮೇ 11: ದೇಶದಲ್ಲಿ ಶೇ.35ರಷ್ಟು ಮಂದಿ ಔಷಧ ಸೇವನೆಯಿಂದಲೇ ರೋಗಿಗಳಾಗುತ್ತಿದ್ದಾರೆ. ಔಷಧದ ಅಡ್ಡಪರಿಣಾಮ ಅದಕ್ಕೆ ಕಾರಣವಾಗಿದೆ ಎಂದು ಇಂಡಿಯನ್ ಫಾರ್ಮೆಸಿ ಕೌನ್ಸಿಲ್‌ನ ಅಧ್ಯಕ್ಷ ಡಾ. ಬಿ. ಸುರೇಶ್ ಹೇಳಿದ್ದಾರೆ. ಒಂದು ರೋಗಕ್ಕೆ ಮದ್ದು ಸೇವಿಸುವಾಗ ಇನ್ನೊಂದು ರೋಗ ಸೃಷ್ಟಿಯಾಗುತ್ತದೆ. ಹೀಗೆ ರೋಗಿಗಳಾಗುವವರ ಸಂಖ್ಯೆ ದೇಶದಲ್ಲಿ ದಿನಾ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಈಗ ವೈದ್ಯರು ಬರೆಯುವ ಮದ್ದು ರೋಗಿಗೆ ನೀಡುವ ಕೆಲಸ ಮಾತ್ರ ಆಗುತ್ತದೆ. ಇದರ ಪ್ರಮಾಣ, ಇದರ ಕೆಲಸ ಮುಂತಾದ ವಿಷಯಗಳ ಮೇಲೆ ನಿಗಾವಿರಿಸುವ ವ್ಯವಸ್ಥೆ ದೇಶದ ತುಂಬಾ ವಿರಳವಾಗಿದೆ. ವೈದ್ಯರ ಜೊತೆ ಒಂದು ಕ್ಲಿನಿಕ್‌ನಲ್ಲಿ ಫಾರ್ಮಸಿಸ್ಟ್ ಇದ್ದರೆ ಈ ಸಮಸ್ಯೆ ಪರಿಹರಿಸಲು ಸಾಧ್ಯವಿದೆ ಎಂದು ಡಾ. ಸುರೇಶ್ ತಿಳಿಸಿದರು.
ವಿಕಸಿತ ದೇಶಗಳ ಕ್ಲಿನಿಕ್‌ಗಳಲ್ಲಿ ಫಾರ್ಮಸಿಸ್ಟ್ ಸಹಾಯವನ್ನು ಚೆನ್ನಾಗಿ ಬಳಸಿಕೊಳ್ಳಲಾಗುತ್ತದೆ. ಅಮೆರಿಕದಲ್ಲಿ ಇನ್ಶೂರೆನ್ಸ್ ಕಂಪೆನಿಯವರು ದೂರಿದ್ದರಿಂದ ಇಂತಹ ಚಿಕಿತ್ಸಾ ವಿಧಾನವನ್ನು ಆರಂಭಿಸಲಾಯಿತು. ಭಾರತ ಸರಕಾರ ಈ ವಿಷಯವನ್ನು ಈಗ ಗಂಭೀರವಾಗಿ ಪರಿಗಣಿಸಿದೆ. ಜೆನರಿಕ್ ಔಷಧವನ್ನು ವ್ಯಾಪಕಗೊಳಿಸಬೇಕೆಂದು ಪ್ರಧಾನಿ ಹೇಳಿದ್ದುಈ ನಿಟ್ಟಿನಲ್ಲಾಗಿದೆ. ಸರಕಾರ ಇದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಸರಿಯಾದ ರೋಗ, ಸರಿಯಾದ ಮದ್ದು, ಸರಿಯಾದ ಪ್ರಮಾಣ, ಸರಿಯಾದ ಸಮಯ ಈ ಧ್ಯೇಯೋದ್ದೇಶದಿಂದ ಫಾರ್ಮೆಸಿ ಕೌನ್ಸಿಲ್ ಕೆಲಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಡಾ.ಸುರೇಶ್ ಹೇಳಿದ್ದಾರೆ.