ಇಡಿಐಐ- ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮಹತ್ವದ ಒಡಂಬಡಿಕೆ
ಮೂಡುಬಿದಿರೆ, ಮೇ 11: ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಎಂಟರ್‌ಪ್ರೆನರ್ ಶಿಪ್ ಡೆವಲಪ್‌ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ್ ಆಳ್ವ ಹಾಗೂ ಇಡಿಐಐ ದಕ್ಷಿಣ ರಾಜ್ಯಗಳ ಪ್ರಾಂತೀಯ ಮುಖ್ಯಸ್ಥ ರಮಣ್ ಗುಜ್ರಾಲ್ ಸಹಿ ಹಾಕಿದರು. ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಯೋಜನೆಯ ಸಂಯೋಜಕರಾದ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ದತ್ತಾತ್ರೇಯ, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೀಶ್ ರಾವ್ ಉಪಸ್ಥಿತರಿದ್ದರು.
ಒಡಂಬಡಿಕೆಯಲ್ಲಿ ಒಳಗೊಂಡಿರುವ ಒಪ್ಪಂದಗಳು: ಇಂದಿನ ಯುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸುವುದು, ಉದ್ದಿಮೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡುವುದು, ಹೊಸ ಆವಿಷ್ಕಾರಗಳನ್ನೊಳಗೊಂಡ ನವೀನ ರೀತಿಯ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು. ಉದ್ದಿಮೆಯಲ್ಲಿ ಯಶಸ್ಸುಗಳಿಸಲು ಬೇಕಾಗುವ ಸಾಮರ್ಥ್ಯಗಳ ಬಗ್ಗೆ ತಜ್ಞರ ಮೂಲಕ ತರಬೇತಿ ನೀಡುವುದು. ಉದ್ಯಮವನ್ನು ಪ್ರಾರಂಭಿಸಲು ಸರ್ಕಾರಗಳು, ಬ್ಯಾಂಕ್ ಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು. ವಿದ್ಯಾರ್ಥಿಗಳು ಸ್ವಂತ ಉದ್ದಿಮೆ ಪ್ರಾರಂಬಿಸುವುದಕ್ಕೆ ಮೊದಲು ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುವುದು. ಮುಖ್ಯವಾಗಿ ಎಂಟರ್‌ಪ್ರೆನರ್ ಶಿಪ್ ಡೆವಲಪ್ ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಕೋರ್ಸ್ ಮುಖಾಂತರ ಅಗತ್ಯ ಜ್ಞಾನವನ್ನು ಒದಗಿಸಿ ಭವಿಷ್ಯದ ಉದ್ಯಮಿಗಳನ್ನು ಸಜ್ಜುಗೊಳಿಸುವುದು.