ಯಡಿಯೂರಪ್ಪಗೆ ಚಾರ್ಜ್‌ಶೀಟ್ ಹಾಕುವ ನೈತಿಕತೆ ಇಲ್ಲ: ಐವನ್ ಡಿಸೋಜ
ಮಂಗಳೂರು, ಮೇ 11: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೇ 13ರಂದು ರಾಜ್ಯ ಸರಕಾರದ ವಿರುದ್ಧ ಚಾರ್ಜ್ ಶೀಟ್ ಹಾಕುವ ಹೇಳಿಕೆ ನೀಡಿರುವುದು ವಿಪರ್ಯಾಸ. ಅವರಿಗೆ ಚಾರ್ಜ್ ಶೀಟ್ ಹಾಕುವ ನೈತಿಕತೆ ಇಲ್ಲ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮೊದಲು ತಮ್ಮ ಮೇಲೆ ಇರುವ ಆಪಾದನೆಗಳಿಂದ ಹೊರಗೆ ಬರಲಿ. ಅವರ ಮೇಲೆ ಹಾಕಿದ ಚಾರ್ಜ್‌ಶೀಟ್‌ಗಳೇ ಸಾಕಷ್ಟು ಇವೆ. ಬಿಜೆಪಿ ಸರಕಾರವಿದ್ದಾಗ ಮೂರು ಮುಖ್ಯಮಂತ್ರಿಗಳನ್ನು ಕಂಡ ರಾಜ್ಯಕ್ಕೆ ಅವರಿಂದ ಕಲಿಯಬೇಕಾದದ್ದೇನೂ ಇಲ್ಲ ಎಂದರು.
ಯಡಿಯೂರಪ್ಪನವರ ಆಡಳಿತವನ್ನು ಜನತೆ ಇನ್ನೂ 25 ವರ್ಷಗಳಷ್ಟು ಕಾಲ ಮರೆಯಲು ಸಾಧ್ಯವಿಲ್ಲ. ಅಂತಹ ಭ್ರಷ್ಟಾಚಾರಗಳು ಅವರ ಅವಧಿಯಲ್ಲಿ ಆಗಿವೆ. ಬಿಎಸ್‌ವೈ ಸೇರಿದಂತೆ ಹಲವು ಮಂದಿ ಇನ್ನೂ ಬೇಲ್ ಮೇಲೆಯೇ ಹೊರಗೆ ಇದ್ದಾರೆ. ಬಿಜೆಪಿಯವರಂತೆ ಕಾಂಗ್ರೆಸಿನವರಾರು ಜೈಲಿಗೆ ಹೋಗಿಲ್ಲ. ಬಿಎಸ್‌ವೈ ಮೇಲಿನ 16 ಕೇಸುಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ. ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯನವರು ಒಬ್ಬರೇ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಸರಕಾರ ವೈಫಲ್ಯ ಕಂಡಿದೆ ಎನ್ನಲು ಯಡಿಯೂರಪ್ಪರಿಗೆ ಯಾವ ನೈತಿಕತೆಯೂ ಇಲ್ಲ. ಅವರ ಅವಧಿಯಲ್ಲಿ ಎಷ್ಟು ಸಾಧನೆಗಳಾಗಿವೆ ಮತ್ತು ಸಿದ್ದರಾಮಯ್ಯನವರ ಅವಧಿಯಲ್ಲಿ ಏನೆಲ್ಲಾ ಕೆಲಸಗಳಾಗಿವೆ ಎಂದು ತಿಳಿಯಲು ಬಿಎಸ್‌ವೈ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಐವನ್ ಡಿಸೋಜ ಸವಾಲು ಹಾಕಿದರು.
ರಾಜ್ಯ ಸರಕಾರ ಹಸಿವು ಮುಕ್ತ ರಾಜ್ಯವನ್ನಾಗಿಸ ಹೊರಟಿದೆ. ಆದರೆ ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲವು ಹೊರಟಿದೆ. ಜನತೆ ಇವೆಲ್ಲವನ್ನು ಗಮನಿಸುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ದೊರೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಈಗಾಗಲೇ ಸಮನ್ವಯ ಸಮಿತಿ ಸಭೆ ನಡೆದಿದ್ದು ಮತ್ತೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ಮಾತುಕತೆಗಳಾಗಿವೆ ಎಂದವರು ಹೇಳಿದರು.