ಮಿಥುನ್ ರೈ ಅಂಗರಕ್ಷಕ ಹಲ್ಲೆ ನಡೆಸಿದ್ದಾಗಿ ಆರೋಪ: ಲುಕ್ಮಾನ್ ಆಸ್ಪತ್ರೆಗೆ ದಾಖಲು
ಮಂಗಳೂರು, ಮೇ 11: ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ವೇಳೆ ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಅಭ್ಯರ್ಥಿ ಲುಕ್ಮಾನ್ ಬಂಟ್ವಾಳ ಅವರಿಗೆ ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಮತ್ತೋರ್ವ ಅಭ್ಯರ್ಥಿ ಮಿಥುನ್ ರೈಯವರ ಅಂಗರಕ್ಷಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಲುಕ್ಮಾನ್ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.
ಯೂತ್ ಕಾಂಗ್ರೆಸ್ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತನ್ನನ್ನು ಕಚೇರಿಗೆ ಕರೆಸಿಕೊಂಡ ಪಕ್ಷದ ಚುನಾವಣಾ ನಿರ್ವಹಣಾಧಿಕಾರಿ ಲೋಕೇಶ್ ಭಾರಧ್ವಾಜ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿಕೊಂಡರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮಿಥುನ್ ರೈ ಅವರು ಭಾರಧ್ವಾಜ್ ಅವರನ್ನು ನಿಂದಿಸುತ್ತಾ, ತರಾಟೆಗೆ ತೆಗೆದುಕೊಂಡರು. ಇದನ್ನು ಪ್ರಶ್ನಿಸಿದ ತನ್ನ ಮೇಲೆಯೇ ಮಿಥುನ್ ಹರಿಹಾಯ್ದಿದ್ದಾರೆ. ಅಲ್ಲದೆ, ಅಲ್ಲೇ ಇದ್ದ ಅವರ ಅಂಗರಕ್ಷಕ ಕೀರ್ತಿ ಎಂಬವರು ತನ್ನ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಲುಕ್ಮಾನ್ ಆರೋಪ ಮಾಡಿದ್ದಾರೆ.
"ಮಿಥುನ್ ಅವರ ಎದುರುಲ್ಲೇ ನನ್ನ ಮೇಲೆ ನಡೆದಿರುವ ಹಲ್ಲೆಯ ದೃಶ್ಯಗಳು ಕಚೇರಿಯಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ" ಎಂದು ಲುಕ್ಮಾನ್ ಹೇಳಿದ್ದಾರೆ.
ಯುವ ಕಾಂಗ್ರೆಸ್ ಪಕ್ಷದ ಮತದಾರರ ಫೊಟೋ, ಮೊಬೈಲ್ ಸಂಖ್ಯೆ, ವಿಳಾಸ ಪಟ್ಟಿಯನ್ನು ಹೊಂದಿದ್ದಾರೆಂಬ ಆರೋಪದ ಮೇಲೆ ಡಿಆರ್‌ಒ ಲೋಕೇಶ್ ಭಾರಧ್ವಾಜ್ ಅವರು ನೋಟಿಸ್‌ನ್ನು ನೀಡಲು ನಗರದ ಪಕ್ಷದ ಕಚೇರಿಗೆ ಲುಕ್ಮಾನ್‌ರನ್ನು ಆಹ್ವಾನಿಸಿದ್ದರು. ಇದೇ ಸಂದರ್ಭದಲ್ಲಿ ಕಚೇರಿಗೆ ಆಗಮಿಸಿದ ಮಿಥುನ್ ರೈ ಅವರು, ಲುಕ್ಮಾನ್ ಅವರಿಗೆ ಸಿಕ್ಕಿರುವ ಮತದಾರರ ಮಾಹಿತಿ ತನಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದರು. ಇದೇ ವಿಷಯದಲ್ಲಿ ಇಬ್ಬರಿಗೂ ಮಾತಿನ ಚಕಮಕಿ ಮತ್ತು ವಾಗ್ವಾದಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಗೆ ಸಚಿವ ಖಾದರ್, ಮುಖಂಡರ ಭೇಟಿ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಲುಕ್ಮಾನ್ ಬಂಟ್ವಾಳ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಮಾಜಿ ಮೇಯರ್ ಕೆ.ಅಶ್ರಫ್, ವಕ್ಫ್ ಬೋರ್ಡ್‌ನ ಎನ್.ಎಸ್.ಕರೀಂ, ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೌನ್ಸಿಲರ್ ಫೈರೋಝ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಎನ್‌ಎಸ್‌ಯುಐ ಮಾಜಿ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಸುರತ್ಕಲ್, ಸದಸ್ಯರಾದ ಅಬ್ದುಲ್ ಸಮದ್ ಅಡ್ಯಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಹಲ್ಲೆ ನಡೆದಿಲ್ಲ: ಮಿಥುನ್ ರೈ
"ಲುಕ್ಮಾನ್ ಅವರು ಆರೋಪಿಸಿದಂತೆ ನನ್ನ ಅಂಗರಕ್ಷಕ ಅವರ ಮೇಲೆ ಹಲ್ಲೆ ನಡೆಸಿಲ್ಲ" ಎಂದು ಜಿಲ್ಲಾ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. "ಲುಕ್ಮಾನ್‌ರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು. ಈ ಬಗ್ಗೆ ಕಚೇರಿಯಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಲಿ, ಸತ್ಯಾಂಶ ಹೊರಬರಲಿದೆ. ಹಲ್ಲೆ ಆರೋಪ ವಿಷಯದಲ್ಲಿ ರಾಜಕೀಯ ಷಡ್ಯಂತ್ರ, ಕಾಣದ ಕೈಗಳು ಕೆಲಸ ಮಾಡಿವೆ" ಎಂದು ಮಿಥುನ್ ರೈ ಆರೋಪಿಸಿದ್ದಾರೆ.