ಕುಡಿಯುವ ನೀರಿಗೆ ಅಧಿಕ ದರ: ರಾಜ್ಯದಲ್ಲಿ 279 ಪ್ರಕರಣ ದಾಖಲು; ಯು.ಟಿ.ಖಾದರ್
ಮಂಗಳೂರು, ಮೇ 11: ಕುಡಿಯುವ ನೀರಿನ ಬಾಟಲ್‌ಗಳನ್ನು ಮತ್ತು ತಂಪು ಪಾನಿಯಗಳನ್ನು ಎಂಆರ್‌ಪಿಗಿಂತ ಮೇಲೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಆಹಾರ ಇಲಾಖೆಯ ಕಾನೂನು ಮಾಪನ ಇಲಾಖೆಯ ಮೂಲಕ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ. 279 ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರಿನ 69 ಕಡೆ ದಾಳಿ ನಡೆಸಿ 12 ಕಡೆಗಳಲ್ಲಿ ಅಧಿಕ ದರದಲ್ಲಿ ನೀರಿನ ಹಾಗೂ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಒಂದೇ ಗುಣಮಟ್ಟದ ನೀರಿನ ಬಾಟಲನ್ನು ಮಾಲ್‌ಗಳ ಹೊರಗೆ ಒಂದು ದರದಲ್ಲಿ, ಮಾಲ್‌ಗಳ ಒಳಗೆ ಇನ್ನೊಂದು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವು ಕಡೆ 20 ರೂ.ಗಳ ಒಂದು ಲೀಟರ್ ನೀರಿನ ಬಾಟಲಿಗೆ 100 ರೂ., 120 ವಸೂಲಿ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ರೀತಿ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಥಮ ಬಾರಿಗೆ 2 ಸಾವಿರ ರೂ. ದಂಡ ಹಾಗೂ ಎರಡನೆ ಬಾರಿ ಪುನರಾವರ್ತನೆಯಾದರೆ ಕ್ರಿಮಿನಲ್ ಪ್ರಕರಣ ಹಾಗೂ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲು ಕಾನೂನು ಪ್ರಕಾರ ಅವಕಾಶವಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನೀರನ್ನು ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರಕಾರಕ್ಕೆ ಪತ್ರ
ನೀರನ್ನು ಅವಶ್ಯಕ ಸಾಮಗ್ರಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ನೈಸರ್ಗಿಕ ಸಂಪತ್ತಾದ ನೀರು ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಆಹಾರ ಪೋಲು ವಿರುದ್ಧ ನೀತಿ: ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಆಹಾರ ಪೋಲು ಮಾಡದಂತೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಶೀಘ್ರದಲ್ಲಿ ಸೂಕ್ತ ನೀತಿಯೊಂದನ್ನು ರೂಪಿಸುವ ಚಿಂತನೆ ಹೊಂದಿರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಹೆಚ್ಚಾಗಿ ವಿವಾಹ ಸಮಾರಂಭದಲ್ಲಿ ಆಹಾರ ಸಾಮಗ್ರಿಗಳು ಪೋಲಾಗದಂತೆ ಪ್ರಿಡ್ಜ್‌ಗಳನ್ನು ಮದುವೆ ಸಮಾರಂಭದ ಸಭಾಂಗಣದಲ್ಲಿ ಅಳವಡಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕ್ರಮ ಕೈ ಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.