×
Ad

ರಾಮಕೃಷ್ಣ ಮೂಲ್ಯ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಸೆರೆ

Update: 2017-05-11 18:34 IST

ಮಂಜೇಶ್ವರ, ಮೇ 11: ಹಾಡಹಗಲೇ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಕಡಿದು ಕೊಲೆಗೈದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಕುಂಬಳೆ ಸಿ.ಐ. ವಿ.ವಿ. ಮನೋಜ್, ಕಾಸರಗೋಡು ಡಿವೈಎಸ್ಪಿ ಸುಕುಮಾರನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತರನ್ನು ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಮಂಡೆಕಾಪು ಎಂಬಲ್ಲಿನ ವ್ಯಾಪಾರಿ ರಾಮಕೃಷ್ಣ ಮೂಲ್ಯ(46) ಎಂಬವರನ್ನು ಕೊಲೆಗೈದ ಆರೋಪಿಗಳು ಎಂದು ಗುರುತಿಸಲಾಗಿದೆ.
  ಎಡನೀರು ಚೂರಿಮೂಲೆ ನಿವಾಸಿ  ಉಮರ್ ಫಾರೂಕ್ (36), ಪೊವ್ವಲ್ ಸ್ಟೋರ್ ಕ್ವಾರ್ಟರ್ಸ್‌ನ ನೌಶಾದ್ ಶೇಕ್ (32), ಬೋವಿಕ್ಕಾನ ಎಂಟನೇ ಮೈಲು ಕಿಂಗ್ ಕ್ವಾರ್ಟರ್ಸ್‌ನ ಅಬ್ದುಲ್ ಹಾರಿಸ್ ಯಾನೆ ಅಚ್ಚು(33), ಚೆಂಗಳ ರಹ್ಮತ್ ನಗರದ ಅಶ್ರಫ್(23) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಕೊಲೆಕೃತ್ಯ ಬಳಿಕ ಹುಬ್ಬಳ್ಳಿ, ಗೋವಾ, ಚಿಕ್ಕಮಗಳೂರು, ಹೈದರಾಬಾದ್ ಮೊದಲಾದೆಡೆಗೆ ಪಲಾಯನಗೈದು ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು, ಆರೋಪಿಗಳನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇ 4ರಂದು ಮಧ್ಯಾಹ್ನ ಮಂಡೆಕಾಪುನಲ್ಲಿರುವ ಜಿ.ಕೆ. ಜನರಲ್ ಸ್ಟೋರ್‌ಗೆ ನುಗ್ಗಿದ ಆರೋಪಿಗಳು ವ್ಯಾಪಾರಿ ರಾಮಕೃಷ್ಣ ಮೂಲ್ಯರನ್ನು ಕಡಿದು ಕೊಲೆಗೈದಿದ್ದರು. ಅಂಗಡಿಗೆ ಬಂದ ತಂಡ ಮಾವಿನ ಹಣ್ಣಿನ ಬೆಲೆ ಕೇಳಿದ್ದು, ಬುಟ್ಟಿಯಿಂದ ಮಾವಿನಹಣ್ಣು ತೆಗೆಯಲು ಮುಂದಾದ ರಾಮಕೃಷ್ಣರನ್ನು ಕಡಿದು ಕೊಲೆಗೈಯ್ಯಲಾಗಿತ್ತು. ವ್ಯಕ್ತಿಯೊಬ್ಬರಿಂದ ಪಡೆದ ಕಪ್ಪುಬಣ್ಣದ ಕಾರಿನಲ್ಲಿ ಆರೋಪಿಗಳು ಬಂದು ಕೊಲೆಗೈದು ಬಳಿಕ ಅದೇ ಕಾರಿನಲ್ಲಿ ಪರಾರಿಯಾಗಿದ್ದರು. ನಂತರ ಕಾರನ್ನು ದೇರಳಕಟ್ಟೆಯ ಅಂಗಡಿಯೊಂದರ ಮುಂದೆ ನಿಲ್ಲಿಸಿ ಕೀಲಿಕೈಯನ್ನು ಅಂಗಡಿಯವರ ಕೈಯಲ್ಲಿ ನೀಡಿ ಆರೋಪಿಗಳು ಬೇರೆ ವಾಹನದಲ್ಲಿ ಪರಾರಿಯಾಗಿದ್ದರು. ಆ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
   ಆರೋಪಿಗಳನ್ನು ಇದೀಗ ಕಾಸರಗೋಡು ಎ.ಆರ್. ಕ್ಯಾಂಪ್‌ಗೆ ತಲುಪಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯಮಾಡಿದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸೆರೆ ಹಿಡಿದ ಪೊಲೀಸ್ ತಂಡದಲ್ಲಿ ಸ್ಪೆಶಲ್ ಸ್ಕ್ವಾಡ್ ಸದಸ್ಯರಾದ ಎಸ್.ಐ. ಫಿಲಿಪ್, ಸಿ.ಕೆ. ಬಾಲಕೃಷ್ಣನ್, ಲಕ್ಷ್ಮೀ ನಾರಾಯಣನ್ ಮೊದಲಾದವರಿದ್ದರು.

ದ್ವೇಷ ಕೊಲೆಗೆ ಕಾರಣ:

ಕಳೆದ ಮಾರ್ಚ್‌ನಲ್ಲಿ ಮುಗು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ 4,453 ರೂ. ಕಳವಾಗಿತ್ತು. ಈ ಪ್ರಕರಣದಲ್ಲಿ ರಾಮಕೃಷ್ಣ ಕೊಲೆ ಪ್ರಕರಣದ ಒಂದನೆ ಆರೋಪಿ ಉಮರ್ ಫಾರೂಕ್‌ನ ಸಹಚರರಾದ ರಹೀಂ ಪಾಷಾ, ರಸಾಕ್  ಎಂಬವರನ್ನು ಮಾರ್ಚ್ 8ರಂದು ಬಂಧಿಸಲಾಗಿತ್ತು.

ಈ ಪ್ರಕರಣ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದುದರಿಂದ ಪ್ರಕರಣವನ್ನು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದೇ ವೇಳೆ ನಾಗರಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ದ್ವೇಷವೇ ರಾಮಕೃಷ್ಣರ ಕೊಲೆಗೆ ಕಾರಣವಾಗಿದೆಯೆಂದು ಆರೋಪಿಗಳನ್ನು ತನಿಖೆಗೊಳಪಡಿಸಿದಾಗ ತಿಳಿದುಬಂದಿದೆಯೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಜೈಲಿನಲ್ಲಿದ್ದ ವೇಳೆ ಕೊಲೆಗೆ ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸರು ನಡೆಸಿದ ತನಿಖೆಯ ವೇಳೆ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News