×
Ad

ಕುಂಬಳೆ: ರಾಜ್ಯ ಸರಕಾರದ ಜನವಿರೋಧಿ ನೀತಿ, ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆಯ ವಿರುದ್ಧ ಉಪವಾಸ ಸತ್ಯಾಗ್ರಹ

Update: 2017-05-11 18:49 IST

ಮಂಜೇಶ್ವರ, ಮೇ 11: ಎಡರಂಗ ಸರಕಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ವರ್ಷಗಳು ತುಂಬುವ ಹೊತ್ತಿನಲ್ಲಿ ಎಲ್ಲೆಡೆ ಕೊಲೆ ರಾಜಕೀಯ, ಸ್ವಜನ ಪಕ್ಷಪಾತ, ಆಡಳಿತ ವೈಫಲ್ಯಗಳಿಂದ ಅಗತ್ಯ ವಸ್ತುಗಳ ಕೊರತೆಯಿಂದ ನಾಗರಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ರಾಜ್ಯ ಈವರೆಗೆ ಇಂತಹ ಮುಖ್ಯಮಂತ್ರಿಯನ್ನು ಕಂಡಿಲ್ಲ. ಜೊತೆಗೆ ಸರಕಾರದ ದೌರ್ಬಲ್ಯದ ವಿರುದ್ಧ ಜನರು ಸ್ವರ ಎತ್ತಲೂ ಹಿಂದೇಟು ಹಾಕುವ ಭಯದ ಮಾನಸಿಕತೆ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
 ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಇಂದು ಕುಂಬಳೆಯಲ್ಲಿ ಹಮ್ಮಿಕೊಂಡ ರಾಜ್ಯ ಸರಕಾರದ ಜನವಿರೋಧಿ ನೀತಿ ಹಾಗು ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆಯ ವಿರುದ್ಧ ಉಪವಾಸ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.

  ಕಳೆದ ಒಂದು ವರ್ಷದಿಂದ ಜಿಲ್ಲೆಯಾದ್ಯಂತ ವ್ಯಾಪಕ ಕೊಲೆ ಪ್ರಕರಣಗಳು ನಡೆದಿವೆ. ಪೊಲೀಸರು ಅಪರಾಧಿಗಳನ್ನು ಗುರುತಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಡುವಲ್ಲಿ ಸಂಪೂರ್ಣ ಪರಾಜಯಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರು ಅಪರಾಧ ಹಿನ್ನೆಲೆಯವರ ಜೊತೆ ಕೈಜೋಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಸರಕಾರ ಸ್ವಜನ ಪಕ್ಷಪಾತದಲ್ಲಿ ವ್ಯಸ್ತವಾಗಿದ್ದು, ಜನಸಾಮಾನ್ಯರಿಗೆ ಸುದೃಢ ಆಡಳಿತ ನೀಡುವುದನ್ನು ಕಡೆಗಣಿಸಿದೆ. ಸ್ವಪಕ್ಷೀಯರು ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವಾಗ ಮುಖ್ಯಮಂತ್ರಿ ಕೇವಲ ಭರವಸೆಯ ಮಂತ್ರದ ಮೂಲಕ ಜನರ ಕಣ್ಣೊರೆಸುವ ಜಾಣ್ಮೆ ಪ್ರದರ್ಶಿಸುತ್ತಿರುವುದು ಜನರಿಗೆ ಅರ್ಥವಾಗುತ್ತಿದೆ ಎಂದು ಅವರು ತಿಳಿಸಿದರು. ಬೇಸಿಗೆಯ ತೀವ್ರತೆಗೆ ಕುಡಿಯುವ ಶುದ್ಧ ಜಲ ಲಭ್ಯತೆ ಎಲ್ಲೂ ಸಮರ್ಪಕವಾಗಿಲ್ಲ. ಗ್ರಾಮ ಪಂಚಾಯತ್ ಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದ ಸರಕಾರ ಇದ್ದೂ ನಿಷ್ಪ್ರಯೋಜಕವಾಗಿರುವುದು ರಾಜ್ಯದ ದೌರ್ಭಾಗ್ಯವೆಂದರು.
 ಮಂಡಲ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಭಂಡಾರಿ ಕುತ್ತಿಕಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಾಮಿಕುಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಎಲ್ ಶೆಟ್ಟಿ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾಸಿರ್ ಮೊಗ್ರಾಲ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಲೋಕನಾಥ ಶೆಟ್ಟಿ, ರವಿ ಪೂಜಾರಿ, ಮೋಹನ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ ಅಬ್ದುಲ್ಲ ಕುಂಞಿ ಮೊದಲಾದವರು ಮಾತನಾಡಿದರು. ದಾಸನ್ ಕಡಪ್ಪುರ, ಕೇಶವ ದರ್ಭಾರ್‌ಕಟ್ಟೆ, ಬಿ.ತಿಮ್ಮಪ್ಪ, ರಾಧಾ ಮುಳಿಯಡ್ಕ, ವಿಶಾಲಾಕ್ಷಿ, ಸಮಿತ್ರಾ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
  ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News