×
Ad

ಆಸಕ್ತಿ, ಶೃದ್ಧೆಯಿಂದ ಸಾಧನೆ: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆದ ರಾಧಿಕಾ ಪೈ ಅನಿಸಿಕೆ

Update: 2017-05-11 21:30 IST

ಉಡುಪಿ, ಮೇ 11: ಕಲಿಕೆಯಲ್ಲಿ ಆಸಕ್ತಿ ಹಾಗೂ ಶೃದ್ಧೆ ಇದ್ದು, ಕಠಿಣ ಅಭ್ಯಾಸ ನಡೆಸಿದರೆ, ಯಾವುದೇ ವಿಶೇಷ ತರಬೇತಿ ಇಲ್ಲದೇ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ತಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿರುವುದೇ ಸಾಕ್ಷಿ ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಧಿಕಾ ಎಂ. ಪೈ ಹೇಳಿದರು.

ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದಾಗ ರಾಧಿಕಾ ತನ್ನ ಸಾಧನೆಯ ಬಗ್ಗೆ ಹೇಳಿಕೊಂಡರು. ಗ್ರಾಮೀಣ ಭಾಗದಿಂದ ಬಂದಿರುವ ತಾನು ಯಾವುದೇ ಕೋಚಿಂಗ್, ತರಬೇತಿ ಇಲ್ಲದೇ ಈ ಸಾಧನೆ ಮಾಡಿರುವುದಾಗಿ ತಿಳಿಸಿದರು. ತನಗೆ ವಿಜ್ಞಾನ ವಿಷಯಗಳಲ್ಲಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ) ತಲಾ 100 ಅಂಕಗಳು ದೊರಕಿದ್ದು, ಭಾಷಾ ವಿಷಯಗಳಲ್ಲಿ (ಇಂಗ್ಲೀಷ್ ಮತ್ತು ಸಂಸ್ಕೃತ) ತಲಾ 98 ಅಂಕಗಳು ದೊರಕಿವೆ ಎಂದರು.

"ಯಾವುದೇ ಕೋಚಿಂಗ್‌ಗೂ ಹೋಗಿರಲಿಲ್ಲ. ಜೆಇಇ ಪರೀಕ್ಷೆ ಬರೆಯಲಿಲ್ಲ. ಕೆಲವರು ಸಲಹೆ ನೀಡಿದರೆಂದು ನೀಟ್ ಪರೀಕ್ಷೆ ಬರೆದಿದ್ದೆ. ಅದಕ್ಕೆ ತಾನು ನಿತ್ಯದ ಅಭ್ಯಾಸವನ್ನೇ ಅವಲಂಬಿಸಿದ್ದೆ. ಮೆಡಿಕಲ್ ನನ್ನ ಆಸಕ್ತಿಯ ವಿಷಯ ಆಗಿರಲಿಲ್ಲ. ನಾನು ಮೊದಲಿನಿಂದಲೂ ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದೆ. ಇದೀಗ ಮುಂದೆ ಮಾಹಿತಿ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಮಾಡುವ ಗುರಿಯನ್ನು ಹೊಂದಿದ್ದೇನೆ" ಎಂದರು.

ಮೊನ್ನೆ ನಡೆದ ಸಿಇಟಿ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದೇನೆ. ಅದಕ್ಕಾಗಿ ಮಾತ್ರ ಕುಂದಾಪುರದಲ್ಲಿ ನಡೆದ ಕ್ರಾಸ್ ಕೋರ್ಸ್‌ನಲ್ಲಿ ಭಾಗವಹಿಸಿದ್ದೆ. ಉಳಿದಂತೆ ಪ್ರತಿದಿನ ಮಾಡುತ್ತಿದ್ದ ಕಡ್ಡಾಯ ಎರಡು ಗಂಟೆಗಳ ಅಭ್ಯಾಸ, ಅಧ್ಯಾಪಕರ ಪಾಠಗಳನ್ನು ಮನನ ಮಾಡಿಕೊಂಡು, ಸಂಶಯಗಳಿದ್ದ ಅವರ ಬಳಿ ವಿಚಾರಿಸುತ್ತಿದ್ದೆ ಎಂದರು.

ರಾಧಿಕಾ ಅವರ ತಂದೆ ಮಾಧವ ಪೈ ಮತ್ತು ಮಾಯಾ ಎಂ.ಪೈ ಇವರ ಏಕೈಕ ಪುತ್ರಿ. ತಂದೆ ಗಂಗೊಳ್ಳಿಯಲ್ಲಿ ಸ್ಟೇಶನರಿ ಅಂಗಡಿ ಹೊಂದಿದ್ದು, ತಾಯಿ ಗೃಹಿಣಿ. ತನ್ನ ಸಾಧನೆ, ಯಶಸ್ಸನ್ನು ರಾಧಿಕಾ ಅರ್ಪಿಸುವುದು ದೇವರ ಆಶೀರ್ವಾದ, ತಂದೆತಾಯಿಯರ ಸಂಪೂರ್ಣ ಬೆಂಬಲ, ಕಾಲೇಜಿನ ಅಧ್ಯಾಪಕರ ಪೂರ್ಣ ಸಹಕಾರ ಹಾಗೂ ತನ್ನ ಸ್ನೇಹಿತರು ನೀಡಿದ ತುಂಬು ಪ್ರೋತ್ಸಾಹಕ್ಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News