ಶಿಕ್ಷಣಕ್ಕೆ ಪೂರಕವಾದ ಅವಕಾಶ ವಂಚಿತ ಕೊರಗ ಮಕ್ಕಳ ಶಿಬಿರ

Update: 2017-05-11 17:35 GMT

ಉಡುಪಿ, ಮೇ 11: ಬೇಲಿಯಲ್ಲಿ ಕಪ್ಪೆ, ಆಮೆ ಹಿಡಿಯುತ್ತ ತಮ್ಮ ರಜಾ ದಿನಗಳನ್ನು ಕಳೆಯುತ್ತಿದ್ದ ಜಿಲ್ಲೆಯ ಅವಕಾಶ ವಂಚಿತ ಮೂಲನಿವಾಸಿ ಕೊರಗರ ಮಕ್ಕಳು ಇದೀಗ ತಮ್ಮ ಮುಂದಿನ ಶಿಕ್ಷಣಕ್ಕೆ ಪೂರಕವಾದ ವಿಜ್ಞಾನ, ಗಣಿತದ ಪಾಠಗಳನ್ನು ಮೋಜಿನ ಮೂಲಕ ಅಭ್ಯಸಿಸುತ್ತಿದ್ದಾರೆ. ಸೃಜನಾತ್ಮಕ ಕಲೆಗಳ ಬಗ್ಗೆ ಹಾಗೂ ತಮ್ಮ ಕುಲ ಕಸುಬುಗಳನ್ನು ಅರಿತುಕೊಳ್ಳುತ್ತಿದ್ದಾರೆ.

ಇದೆಲ್ಲ ಸಾಧ್ಯವಾಗಿರುವುದು ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊರಗ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10 ದಿನಗಳ ಕಾಲ ಹಮ್ಮಿಕೊಂಡಿರುವ ಕೊರಗ ವಿದ್ಯಾರ್ಥಿಗಳ ಬೇಸಿಗೆ ಶಿಬಿರದಲ್ಲಿ.

ಮೇ 8ರಿಂದ ಆರಂಭಗೊಂಡಿರುವ ಈ ಶಿಬಿರವು ಮೇ 17ರವರೆಗೆ ನಡೆಯಲಿದೆ. ಇದು ಸತತ ಎಂಟು ವರ್ಷಗಳಿಂದ ನಡೆಯುತ್ತ ಬರುತ್ತಿದೆ. ಈ ಶಿಬಿರದಲ್ಲಿ ಜಿಲ್ಲೆಯ ಮೂರು ತಾಲೂಕುಗಳ 5ನೆ ತರಗತಿಯಿಂದ 10ನೆ ತರಗತಿ ವರೆಗಿನ ಒಟ್ಟು 48 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇವರಲ್ಲಿ 29 ಬಾಲಕರು ಮತ್ತು 19 ಬಾಲಕಿಯರು. ಕಾರ್ಕಳ ತಾಲೂಕಿನ 6, ಕುಂದಾಪುರ 20 ಮತ್ತು ಉಡುಪಿ ತಾಲೂಕಿನ 23 ಮಕ್ಕಳಿದ್ದಾರೆ.

‘ಕೊರಗ ಅಭಿವೃದ್ಧಿ ಯೋಜನೆಯಲ್ಲಿನ ಅನುದಾನವನ್ನು ಬಳಸಿ ಈ ಶಿಬಿರ ವನ್ನು ನಡೆಸಲಾಗುತ್ತಿದೆ. ಮಕ್ಕಳಿಗೆ ಬೇಕಾದ ಎಲ್ಲ ರೀತಿ ತರಬೇತಿಯನ್ನು ನೀಡಲಾಗುತ್ತಿದೆ. ಕೊರಗ ಮಕ್ಕಳ ಮಾನಸಿಕ ಸ್ಥೈರ್ಯ ತುಂಬಲು ಹಾಗೂ ಅವರಲ್ಲಿನ ಸಂಕೋಚವನ್ನು ದೂರ ಮಾಡಲು ಮಾನಸಿಕ ತಜ್ಞರಿಂದ ಉಪನ್ಯಾಸ ನೀಡಲಾಗುತ್ತದೆ. ಒಟ್ಟಾರೆ ಕೊರಗ ಮಕ್ಕಳನ್ನು ಇತರರಂತೆ ಪರಿಪೂರ್ಣರನ್ನಾಗಿಸುವುದೇ ಈ ಶಿಬಿರದ ಉದ್ದೇಶವಾಗಿದೆ’ ಎಂದು ಉಡುಪಿ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಹರೀಶ್ ಗಾಂವ್ಕರ್ ತಿಳಿಸಿದ್ದಾರೆ.

ಹೊಸಹೊಸ ತರಬೇತಿಗಳು: ಕೊರಗ ಮಕ್ಕಳಿಗಾಗಿಯೇ ಈ ಶಿಬಿರವನ್ನು ಪ್ರತಿವರ್ಷ ನಡೆಸುತ್ತ ಬರಲಾಗುತ್ತಿದೆ. ಜಿಲ್ಲೆಯ ಕೊರಗ ಜನಸಂಖ್ಯೆ ಕೂಡ ತೀರಾ ಕಡಿಮೆಯಾಗುತ್ತಿರುವುದರಿಂದ ಶಿಬಿರಕ್ಕೆ ಮಕ್ಕಳು ಸಿಗುವುದು ಕೂಡ ವಿರಳ. ಈ ಬಾರಿ 100 ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಗುರಿ ಹೊಂದಲಾಗಿತ್ತು. ಆದರೆ ಶಿಬಿರಕ್ಕೆ ಬಂದಿರುವುದು ಕೇವಲ 48.

ಇವರಲ್ಲಿ ಬಹುತೇಕ ಮಕ್ಕಳು ಪ್ರತಿವರ್ಷ ಶಿಬಿರದಲ್ಲಿ ಭಾಗವಹಿಸುವವರು. ಕಳೆದ ವರ್ಷ ಶಿಬಿರದಲ್ಲಿ ನೀಡಲಾದ ವಿಷಯ ಹಾಗೂ ತರಬೇತಿಗಳನ್ನು ಕೈಬಿಟ್ಟು ಈ ಬಾರಿ ಹೊಸಹೊಸ ವಿಷಯಗಳನ್ನು ಮಕ್ಕಳಿಗೆ ಹೇಳಲಾಗುತ್ತಿದೆ. ಶಿಕ್ಷಣಕ್ಕೆ ಪೂರಕವಾದ ವಿಜ್ಞಾನ ಉಪಕರಣಗಳ ತಯಾರಿ, ಕಸದಿಂದ ವಿಜ್ಞಾನ ಮಾದರಿಗಳ ತಯಾರಿ, ಸರಳ ವಿಜ್ಞಾನ ಉಪಕರಣಗಳ ತಯಾರಿ, ಸ್ಪೋಕನ್ ಇಂಗ್ಲಿಷ್, ಸರಳ ಗಣಿತ, ಸರಳವಾಗಿ ಗಣಿತ ಸಮಸ್ಯೆಗಳನ್ನು ಬಿಡಿಸುವ ಕಲೆಗಳನ್ನು ಹೇಳಿಕೊಡಲಾಗುತ್ತಿದೆ.

ಮಕ್ಕಳ ಸೃಜನಾತ್ಮಕ ಪ್ರಗತಿಗೆ ಪೂರಕವಾದ ನೇಲ್ ಆರ್ಟ್, ಬಲೂನ್ ಮಾಸ್ಕ್ ತಯಾರಿ, ವರ್ಲಿ ಚಿತ್ರಕಲೆ, ಸಂಗೀತ ಹಾಡುಗಾರಿಕೆ, ನಾಯಕತ್ವ ಮತ್ತು ಭಾಷಣ ಕಲೆ, ಯೋಗ ತರಬೇತಿ, ಎಂಬೋಸ್ಸಿಂಗ್ ಆರ್ಟ್, ಪಿಲಿಕುಳ ವಿಜ್ಞಾನ ಕೇಂದ್ರಕ್ಕೆ ಭೇಟಿ, ರಂಗಕಲೆ, ರಂಗೋಲಿ ಕಲೆ, ಒರಿಗಾಮಿ ಕಲೆ, ಬಣ್ಣ ಗಳೊಂದಿಗೆ ಆಟ, ಅಲಂಕಾರಿಕ ದಿಂಬುಗಳು, ಕಿವಿಯೋಲೆ ತಯಾರಿ ತರ ಬೇತಿಗಳನ್ನು ನೀಡಲಾಗುತ್ತಿದೆ.

ಇದರೊಂದಿಗೆ ಮಕ್ಕಳ ಹಾಗೂ ಮಾನಸಿಕ ತಜ್ಞರಿಂದ ಹೆಣ್ಣು ಮಕ್ಕಳಿಗೆ ದೈಹಿಕ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಉಪನ್ಯಾಸ, ಕೊರಗ ಸಂಸ್ಕೃತಿಯ ಬಗ್ಗೆ ಉಪನ್ಯಾಸ, ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಾಗುತ್ತದೆ. ಅಲ್ಲದೆ ವಿವಿಧ ಕ್ರೀಡಾ ತರಬೇತಿ, ಅಥ್ಲೆಟಿಕ್ ತರಬೇತಿಯನ್ನು ಮಕ್ಕಳಿಗೆ ಹೇಳಿಕೊಡ ಲಾಗುತ್ತಿದೆ.

ಕೊರಗರ ಕುಲಕಸುಬುಗಳಾದ ಬುಟ್ಟಿ ನೇಯುವುದು, ಸಿಬ್ಲು ತಯಾರಿಸುವುದು ಮತ್ತು ಕೊರಗರ ಕಲೆಯಾದ ಕೊಳಲು, ಡೋಲು ವಾದ್ಯ ಬಗ್ಗೆ ಕೂಡ ತರಬೇತಿ ನೀಡಲಾಗುತ್ತದೆ. ಎ.17ರಂದು ಕೊರಗ ಮಕ್ಕಳು ಶಿಬಿರದಲ್ಲಿ ತಯಾರಿಸಿದ ಸೃಜನಾತ್ಮಕ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಶಿಬಿರದ ಸಮನ್ವಯಕಾರ ಹರೀಶ್ ನಾಯ್ಕೆ ತಿಳಿಸಿದ್ದಾರೆ.

ರಜೆಯಲ್ಲಿ ಬೇಲಿ ಬದಿ ಅಲೆದಾಡುತ್ತಿದ್ದ ಕೊರಗ ಮಕ್ಕಳಿಗೆ ಇಂತಹ ಶಿಬಿರ ಅತ್ಯಂತ ಅವಶ್ಯಕ. ಇಲ್ಲಿ ಮಕ್ಕಳಿಗೆ ಬೇಕಾದ ಒಳ್ಳೆಯ ವಾತಾವರಣ ಇದೆ. ಆಟ, ಮೋಜಿನ ಮೂಲಕವೇ ಮಕ್ಕಳು ಎಲ್ಲವನ್ನು ಕಲಿಯುತ್ತಿದ್ದಾರೆ. ಈ ಶಿಬಿರದಲ್ಲಿ ಮಕ್ಕಳು ಸಾಕಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಂಕೋಚ ಮನೋ ಭಾವದ ಕೊರಗ ಮಕ್ಕಳು ಎಲ್ಲರೊಂದಿಗೆ ಬೆರೆಯುವುದರಿಂದ ಮಾನಸಿಕವಾಗಿ ಹೆಚ್ಚು ಚಟುವಟಿಕೆಯಿಂದ ಇರಲು ಈ ಶಿಬಿರ ಸಹಕಾರಿಯಾಗಲಿದೆ.
-ಗಣೇಶ್ ಕೊರಗ, ಕೊರಗ ಸಂಘಟನೆಯ ಮುಖಂಡ

ನಾನು ಈ ಶಿಬಿರದಲ್ಲಿ ಸತತ ಐದನೆ ಬಾರಿಗೆ ಭಾಗವಹಿಸುತ್ತಿದ್ದೇನೆ. ಇದರಿಂದ ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ನಾಯಕತ್ವ ಹಾಗೂ ಭಾಷಣ ಕಲೆಗಳ ಬಗ್ಗೆ ತರಬೇತಿ ನೀಡಿರುವುದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಶಿಕ್ಷಣಕ್ಕೆ ಪೂರಕವಾದ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಇದರಿಂದ ಯಾವ ರೀತಿ ಓದಬೇಕು ಮತ್ತು ಏಕಾಗ್ರತೆಯನ್ನು ತಿಳಿದುಕೊಂಡಿದ್ದೇವೆ. 

-ಅಪರಾಜಿತ ಬೆಳ್ವೆ, 9ನೆ ತರಗತಿ ವಿದ್ಯಾರ್ಥಿನಿ, ಕೂರಾಡಿ 

ಇದು ನನ್ನ ಆರನೆ ಶಿಬಿರ. ವಿವಿಧ ಕಲೆಗಳನ್ನು ಇಲ್ಲಿ ಹೇಳಿಕೊಡುತ್ತಿದ್ದಾರೆ. ಹಾಡುಗಾರಿಕೆ ನನಗೆ ತುಂಬಾ ಇಷ್ಟ. ಈ ಶಿಬಿರದಿಂದ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುತ್ತಿದೆ. ಇಲ್ಲದಿದ್ದರೆ ನಾವು ನೆಂಟರ ಮನೆಗೆ ಹೋಗಿ ರಜೆ ಕಳೆಯುತ್ತಿದ್ದೆವು.

-ಸುಶ್ಮಿತಾ, ಎಂಟನೆ ತರಗತಿ ವಿದ್ಯಾರ್ಥಿನಿ, ಬಾರಕೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News