ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಸಾಕ್ಷಿ ಮಲಿಕ್ ಫೈನಲ್‌ಗೆ ಪ್ರವೇಶ
ಹೊಸದಿಲ್ಲಿ, ಮೇ 12: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್(60 ಕೆಜಿ) ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪುವುದರೊಂದಿಗೆ ಬೆಳ್ಳಿ ಪದಕವನ್ನು ದೃಢಪಡಿಸಿದ್ದಾರೆ.
ಹರ್ಯಾಣದ 24ರ ಹರೆಯದ ಕುಸ್ತಿಪಟು ಸಾಕ್ಷಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಝಕಿಸ್ತಾನದ ಆಯಾಯುಲಿಮ್ ಕಾಸಿಮೊವಾರನ್ನು ಮಣಿಸಿ ಫೈನಲ್‌ಗೆ ತಲುಪಿದರು. ಇದಕ್ಕೆ ಮೊದಲು ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಕುಸ್ತಿಪಟು ನಾಬಿರಾ ಎಸೆನ್‌ಬಾಯೆವಾರನ್ನು 6-2 ರಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪಿದ್ದರು.
ಸಾಕ್ಷಿ ಮಲಿಕ್ ಫೈನಲ್ ಸುತ್ತಿನಲ್ಲಿ ಜಪಾನ್‌ನ ಒಲಿಂಪಿಕ್ಸ್ ಚಾಂಪಿಯನ್ ರಿಸಾಕೊ ಕವಾಯಿ ಅವರನ್ನು ಎದುರಿಸಲಿದ್ದಾರೆ.
ರಿಯೋ ಗೇಮ್ಸ್‌ನಲ್ಲಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಈ ಸಾಧನೆ ಮಾಡಿದ್ದ ಭಾರತದ ಮೊದಲ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿದ್ದರು.
ಸಾಕ್ಷಿ 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ 2015ರ ದೋಹಾ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.