×
Ad

ಹಳ್ಳಿಹೈದ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್

Update: 2017-05-12 16:09 IST

ಮಂಗಳೂರು, ಮೇ 12: ದ.ಕ. ಜಿಲ್ಲೆಗೆ ಕಡಬ ಅಂದರೆ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶ. ಇದೀಗ ಕಡಬವನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದಾತ 15ರ ಬಾಲಕ ಪೂರ್ಣಾನಂದ. ಇಂದು ಪ್ರಕಟಗೊಂಡ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕರ್ನಾಟಕಕ್ಕೇ ಟಾಪರ್ ಗಳಲ್ಲಿ ಈತನೂ ಓರ್ವ. ಈತ ಗಳಿಸಿದ್ದು 625ಕ್ಕೆ 625 ಅಂಕ.

ಕಡಬ ಸೈಂಟ್ ಜಾಕಿಮ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಎಚ್.ಪೂರ್ಣಾನಂದನ ಫಲಿತಾಂಶದಿಂದಾಗಿ ಇಂದು ಊರಿಡೀ ಪರಮಾನಂದದ ವಾತಾವರಣ. ಕಡಬಕ್ಕೆ ಕಡಬವೇ ಸಡಗರ ಪಡುತ್ತಿದೆ.

ಪೂರ್ಣಾನಂದ ಬಡತನದಲ್ಲಿ ಕೃಷಿ ಕುಟುಂಬದಲ್ಲಿ ಬೆಳೆದ ಹುಡುಗ. ಆತನ ಶಾಲೆಯಿಂದ ಮನೆಗೆ ಆರು ಕಿ.ಮೀ. ದೂರ ಇದೆ. ಕುಟ್ರುಪ್ಪಾಡಿ ಗ್ರಾಮದ ಹಳ್ಳಂಗೇರಿ ಮನೆಯ ಕುಗ್ರಾಮದಿಂದ ದಿನನಿತ್ಯ 2 ಕಿ.ಮೀ. ನಡೆದುಕೊಂಡು ಹೊಸಮಠ ಮುಖ್ಯರಸ್ತೆಗೆ ಬರುತ್ತಿದ್ದ ಪೂರ್ಣಾನಂದ ಅಲ್ಲಿಂದ 4 ಕಿ.ಮೀ. ಬಸ್ ಪ್ರಯಾಣ ಮೂಲಕ ಶಾಲೆಗೆ ತಲುಪುತ್ತಿದ್ದ. ಇದು 8ನೇ ತರಗತಿಯಿಂದ ಈ ತನಕ ದಿನನಿತ್ಯ ನಡೆಯುತ್ತಿತ್ತು. ಒಂದನೇ ತರಗತಿಯಿಂದ ಈ ತನಕ ಅದೇ ಸೈಂಟ್ ಜಾಕಿಮ್ಸ್ ಶಾಲೆಯಲ್ಲಿ ಕಲಿತ ಪೂರ್ಣಾನಂದ, ''ವಿದ್ಯಾ ಸಂಸ್ಥೆಯ ಸಿಬ್ಬಂದಿ ಆಡಳಿತ ವರ್ಗದ ಪ್ರೋತ್ಸಾಹ, ನನ್ನ ಹೆತ್ತವರ ಉತ್ತೇಜನದಿಂದ ಇಂದು ಈ ಫಲಿತಾಂಶ ಬಂದಿದೆ. ರಾಜ್ಯಕ್ಕೆ ಟಾಪರ್ ಅಂತ ಅನ್ನಿಸಿರಲಿಲ್ಲ. ಮುಂದೆ ಅಗ್ರಿಕಲ್ಚರ್ ಬಿಎಸ್ಸಿ ಮಾಡಬೇಕೆಂಬ ಬಯಕೆ ಇದೆ'' ಅಂತಾರೆ. ಚೆಸ್ ಹಾಗೂ ಕೇರಂ ನಲ್ಲೂ ಈತನಿಗೆ ಆಸಕ್ತಿಯಿದೆ.

ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ, ಕೃಷಿಕ ವಿಷ್ಣುಮೂರ್ತಿ ಹಾಗೂ ಸುಳ್ಯ ಪಾಲಿಟೆಕ್ನಿಕ್ ನಲ್ಲಿ ಲೈಬ್ರೆರಿಯನ್ ಆಗಿ ನಿವೃತ್ತಿಯಾಗಿರುವ ಸವಿತಾ ದಂಪತಿಯ ದ್ವಿತೀಯ ಪುತ್ರನಾಗಿರುವ ಪೂರ್ಣಾನಂದ ರಾಜ್ಯ ಕಂಡ ಅಪೂರ್ವ ಪ್ರತಿಭೆ ಎನ್ನಲು ಖುಷಿಯಾಗುತ್ತಿದೆ ಎನ್ನುತ್ತಾರೆ ಹೆತ್ತವರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯವ ಶ್ರೀರಾಮ ಮಂಗಳೂರಿನಲ್ಲಿ ಜಿಟಿಟಿಸಿ ಡಿಪ್ಲೊಮಾ ಮಾಡಿ ಪ್ರಸ್ತುತ ದೊಡ್ಡಬಳ್ಳಾಪುರದಲ್ಲಿ ತರಬೇತಿಯಲ್ಲಿದ್ದಾರೆ. ಪೂರ್ಣಾನಂದ ಸಾಧನೆ ಜೊತೆಗೆ ದೇವರ ಅನುಗ್ರಹ ಇದೆ ಅನ್ನುತ್ತಾರೆ ಆತನ ತಂದೆ ವಿಷ್ಣುಮೂರ್ತಿ. ಒಟ್ಟಿನಲ್ಲಿ ಈ ಫಲಿತಾಂಶ ಕರಾವಳಿ ಜಿಲ್ಲೆಗೆ ಹೆಮ್ಮೆ ತಂದಿದೆ.

Writer - -ರಶೀದ್ ವಿಟ್ಲ.

contributor

Editor - -ರಶೀದ್ ವಿಟ್ಲ.

contributor

Similar News