ಸಸಿಹಿತ್ಲು ಬೀಚ್‌ನಲ್ಲಿ ಇಂಡಿಯನ್ ಓಪನ್ ಸರ್ಫಿಂಗ್ ವೆಬ್‌ಸೈಟ್ ಅನಾವರಣ

Update: 2017-05-12 11:50 GMT

ಮಂಗಳೂರು, ಮೇ 12: : ಇಲ್ಲಿನ ಸುರತ್ಕಲ್ ಸಮೀಪದ ಸಸಿಹಿತ್ಲು ಬಿಚ್‌ನಲ್ಲಿ ಮೇ 26ರಿಂದ 28ರವರೆಗೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆ- ‘ಕರ್ನಾಟಕ ಸರ್ಫಿಂಗ್ ಫೆಸ್ಟಿವಲ್’ ಹಮ್ಮಿಕೊಳ್ಳಲಾಗಿದೆ.

ಇಂದು ಈ ಕುರಿತ ವೆಬ್‌ಸೈಟ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್, ಮಂತ್ರ ಸರ್ ಕ್ಲಬ್ ಆಶ್ರಯದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದ್ದು, ಸುಮಾರು 120ರಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಮಂಗಳೂರು ಗಾಳಿಪಟ ಉತ್ಸವದ ಮೂಲಕ ಈಗಾಗಲೇ ವಿಸ್ವಾದ್ಯಂತ ಗಮನಸೆಳೆದಿದೆ. ಇದೀಗ ಸರ್ಫಿಂಗ್ ಮೂಲಕವೂ ಗಮನಸೆಳೆಯುತ್ತಿದೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಆಗುವಲ್ಲಿ ಈಗಿನಿಂದಲೇ ತಯಾರಿ ಬೇಕು. ಅಲ್ಲದೆ ಬೋಟ್ ರೇಸ್ ಆಯೋಜಿಸುವ ಕುರಿತೂ ಪ್ರಯತ್ನನಗಳು ನಡೆಯಬೇಕಿದೆ ಎಂದರು.

ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಜಗದೀಶ್, ದಕ್ಷಿಣ ಕನ್ನಡ ಪ್ರವಾಸೋದ್ಯಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಹೇಳಿದರು.

ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಮತ್ತು ಮೇಯರ್ ಕವಿತಾ ಸನಿಲ್ ಶುಭ ಹಾರೈಸಿದರು.
ಸರ್ಫಿಂಗ್ ಸ್ವಾಮಿ ಎಂದೇ ಖ್ಯಾತರಾದ ಜ್ಯಾಕ್ ಹೆಬ್ನರ್, ಕೆನರಾ ಚೇಂಬರ್ ಆ್ ಕಾಮರ್ಸ್ ಅಧ್ಯಕ್ಷ ಜೀವನ್ ಸಲ್ದಾನ್ಹ ಉಪಸ್ಥಿತರಿದ್ದರು.

ಮುಂದಿನ ವರ್ಷ ವಿಶ್ವ ಸರ್ಫಿಂಗ್ ಸ್ಪರ್ಧೆ: ಡಾ. ಜಗದೀಶ್
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಕಳೆದ ವರ್ಷ ರಾಷ್ಟ್ರೀಯ ಸರ್ಫಿಂಗ್‌ನ್ನು ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ ವಿಶ್ವ ಸರ್ಫಿಂಗ್ ಸ್ಪರ್ಧೆ ಆಯೋಜಿಸುವ ಚಿಂತನೆಯಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಮುಂದಿನ ವರ್ಷ ವಿಶ್ವ ಸರ್ಫಿಂಗ್ ಸ್ಪರ್ಧೆ ನಡೆಸಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News