ಎಸೆಸೆಲ್ಸಿ ಫಲಿತಾಂಶ: ಆಳ್ವಾಸ್‌ನ ಇಬ್ಬರು ರಾಜ್ಯಕ್ಕೆ ತೃತೀಯ
ಮೂಡುಬಿದಿರೆ, ಮೇ 12: ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ 3ನೆ ರ್ಯಾಂಕ್ ಪಡೆದುಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಎಲಂದೂರ್ ತಾಲೂಕಿನ ಮದ್ದೂರಿನ ನಂದೀಶ್ ಮೂರ್ತಿ ಸಿ. ಹಾಗೂ ಮಂಜುಳಾ ಬಿ.ಎನ್. ದಂಪತಿಯ ಪುತ್ರಿ ದೀಕ್ಷಾ ಎಂ.ಎನ್. ಹಾಗೂ ಬೆಂಗಳೂರು ಯಲಹಂಕ ನ್ಯೂಟೌನ್‌ನ ಮಂಜುನಾಥ ಎನ್. ನಾಯರಿ ಹಾಗೂ ಗೀತಾ ಎಂ. ದಂಪತಿಯ ಪುತ್ರ ಆಕಾಶ್ ಎಂ. ನಾಯರಿ ಈ ಸಾಧನೆ ಮಾಡಿದವರು.
ದೀಕ್ಷಾ, ಗಣಿತ ಹಾಗೂ ಇಂಗ್ಲಿಷ್‌ನಲ್ಲಿ 99, ಕನ್ನಡದಲ್ಲಿ 125 ರಲ್ಲಿ 125, ಉಳಿದ ವಿಷಯಗಳಲ್ಲಿ ನೂರಕ್ಕೆ ನೂರು ಪಡೆದಿದ್ದಾರೆ.
ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜದಲ್ಲಿ ನೂರಕ್ಕೆ 100, ಕನ್ನಡದಲ್ಲಿ ನೂರಕ್ಕೆ 99, ಹಾಗೂ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 124 ಅಂಕಗಳನ್ನು ಆಕಾಶ್ ಎಂ. ನಾಯರಿ ಪಡೆದಿದ್ದಾರೆ.
ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮುಖ್ಯೋಪಾಧ್ಯಾಯರಾದ ವಸಂತ್ ಕುಮಾರ್ ನಿಟ್ಟೆ, ಶಿಕ್ಷಕರು ಹಾಗೂ ನನ್ನ ಹಾಸ್ಟೆಲ್ ಸ್ನೇಹಿತರು ನನ್ನ ಈ ಅಂಕಗಳಿಕೆಗೆ ಸ್ಪೂರ್ತಿಯಾದವರು. ಜೊತೆಗೆ ಆಳ್ವಾಸ್ ಪ್ರೌಢಶಾಲೆಯ ವಾತಾವರಣ ಕಲಿಕೆಗೆ ಪೂರಕವಾಗಿತ್ತು. ತರಗತಿಯಲ್ಲಿ ಮಾಡಿದ ಪಾಠ ಕೇಳಿ ಚೆನ್ನಾಗಿ ಅರ್ಥೈಯಿಸಿಕೊಂಡಲ್ಲಿ ಹೆಚ್ಚು ಅಂಕಗಳಿಕೆಗೆ ಸಾಧ್ಯವಿದೆ. ಯಾವುದೇ ವಿಶೇಷ ತರಬೇತಿಯನ್ನು ನಾನು ಪಡೆದಿಲ್ಲ. ಮುಂದಕ್ಕೆ ಆಳ್ವಾಸ್‌ನಲ್ಲಿಯೇ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡುವ ಯೋಚನೆ ಮಾಡಿದ್ದೇನೆ.
- ದೀಕ್ಷಾ ಎಂ.ಎನ್.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹಾಗೂ ಸಮಸ್ತ ಶಿಕ್ಷಕ ವರ್ಗ, ಹಾಸ್ಟೆಲ್ ವಾರ್ಡನ್‌ಗಳ ಬೆಂಬಲ ಹಾಗೂ ನಿರಂತರ ಕಲಿಕೆಯಿಂದ ಮಗಳು ಯಶಸ್ವಿಯಾಗಿದ್ದಾಳೆ.
- ನಂದೀಶ್ ಮೂರ್ತಿ ಸಿ., ಜೆ.ಟಿ.ಒ., ಕೊಳ್ಳೇಗಾಲ ಸರಕಾರಿ ಐಟಿಐ (ದೀಕ್ಷಾ ಎಂ. ಎನ್. ತಂದೆ)
ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರಂತರ ಪ್ರೋತ್ಸಾಹ ಆಳ್ವಾಸ್‌ನಲ್ಲಿ ದೊರಕಿದ್ದರಿಂದ ಗರಿಷ್ಠ ಅಂಕ ಪಡೆದು ಸಾಧನೆಗೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಶಿಕ್ಷಕರ ಮಾತನ್ನು ಚಾಚೂತಪ್ಪದೇ ಪಾಲಿಸಿದಲ್ಲಿ ಯಶಸ್ಸು ಪಡೆಯಬಹುದು. ಶಿಕ್ಷಕರ ಮಾತು ನಮ್ಮ ಒಳ್ಳೆಯದಕ್ಕೆಂದು ಭಾವಿಸಿದರೆ ಅದರ ಫಲ ನಮಗೆ ದೊರಕುತ್ತದೆ.
- ಆಕಾಶ್ ಎಂ. ನಾಯರಿ
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಿಕ್ಷಣದಲ್ಲಿ ಆಕಾಶ್‌ಗೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದಿಂದ ದೊರೆತ ಮಾರ್ಗದರ್ಶನವೇ ಇಂದಿನ ಈ ಫಲಿತಾಂಶಕ್ಕೆ ಕಾರಣ. ಹಾಸ್ಟೆಲ್‌ನಲ್ಲಿದ್ದು ಓದಿರುವ ಮಗನ ಜೊತೆ ಕೆಲವೊಂದು ಬಾರಿ ನಮಗೆ ಫೋನ್ ಮಾಡಿ ಮಾತಾಡಲೂ ಸಮಯವಿರಲಿಲ್ಲ. ಆಗೆಲ್ಲ ತುಂಬಾ ಆತಂಕಗೊಳ್ಳುತ್ತಿದ್ದೆವು. ಆದರೆ ಆ ಶ್ರಮದ ಹಿಂದಿರುವ ನೋವು ಈಗ ಈ ಸಾಧನೆಯ ಮೂಲಕ ಮರೆಯಾಗಿದೆ.
-ಮಂಜುನಾಥ ಎಂ. ನಾಯರಿ (ಆಕಾಶ್‌ನ ತಂದೆ) ಬೇಕರಿ ಮಾಲಕ, ಯಲಹಂಕ ನ್ಯೂಟೌನ್, ಬೆಂಗಳೂರು