ಮಂಗಳೂರು: ಬ್ಯಾಂಕ್ ಗೆ ಸೇರಿದ 7.50 ಕೋಟಿ ರೂ. ಸಾಗಿಸುತ್ತಿದ್ದ ವಾಹನ ನಾಪತ್ತೆ
Update: 2017-05-12 18:15 IST
ಮಂಗಳೂರು, ಮೇ 12: ಬ್ಯಾಂಕಿನ ಹಣ ಸಾಗಿಸುತ್ತಿದ್ದ ವಾಹನವೊಂದು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ 7.50 ಕೋಟಿ ರೂ.ಸಾಗಿಸುತ್ತಿದ್ದ ಸಿಸ್ಕೋ ಕಂಪೆನಿಗೆ ಸೇರಿದ ಬೊಲೆರೊ ವಾಹನ ನಾಪತ್ತೆಯಾಗಿದೆ. ಆ್ಯಕ್ಸಿಸ್ ಬ್ಯಾಂಕಿಗೆ ಸೇರಿದ ಹಣ ಇದಾಗಿದ್ದು, ವಾಹನದಲ್ಲಿ ಸಿಸ್ಕೋ ಕಂಪೆನಿಯ ಕರಿಬಸವ, ಪರಶುರಾಮ್, ಬಸಪ್ಪ, ಪೂವಣ್ಣ ಎಂಬ ಸಿಬ್ಬಂದಿಯಿದ್ದರು.
ನಿನ್ನೆ ಮುಂಜಾನೆ ಮಂಗಳೂರಿನ ಯೆಯ್ಯಾಡಿ ಕರೆನ್ಸಿ ಚೆಸ್ಟ್‌ನಿಂದ ಹೊರಟಿದ್ದ ವಾಹನ ಇನ್ನೂ ಬೆಂಗಳೂರಿಗೆ ತಲುಪಿಲ್ಲ. ಹಣದೊಂದಿಗೆ ನಾಲ್ವರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ನಾಲ್ವರ ಮೊಬೈಲ್ ಫೋನ್ ನಾಟ್ ರೀಚೇಬಲ್ ಆಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.