ತಂದೆ ತಾಯಿಯೇ ನನಗೆ ಆದರ್ಶರು: ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿ ಜಯನಿ ಅನಿಸಿಕೆ
ಮಂಗಳೂರು, ಮೇ 12: "ನನ್ನ ಹೆತ್ತವರೇ ಪ್ರಥಮವಾಗಿ ನನಗೆ ಆದರ್ಶರು. ಅವರ ಪ್ರೋತ್ಸಾಹ ಹಾಗೂ ಶಿಕ್ಷಕರ ಬೆಂಬಲದಿಂದಾಗಿಯೇ ನಾನಿಂದು ಈ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ" ಎಂದು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹ್ಮೊಮಿರುವವರಲ್ಲಿ ಒಬ್ಬಾಕೆಯಾದ ಜಯನಿ ಆರ್. ನಾಥ್ ಅಭಿಪ್ರಾಯಿಸಿದ್ದಾರೆ.
625ರಲ್ಲಿ 624 ಅಂಕಗಳನ್ನು ಪಡೆದಿರುವ ಜಯನಿಗೆ ತಾನು ಇಷ್ಟೇ ಅಂಕಗಳನ್ನು ಪಡೆಯುವ ಸ್ಪಷ್ಟವಾದ ಚಿತ್ರಣ ಪರೀಕ್ಷೆ ಮುಗಿದಾಗಲೇ ದೃಢಗೊಂಡಿತ್ತು. ಆಂಗ್ಲ ಭಾಷಾ ಪತ್ರಿಕೆಯ ವ್ಯಾಕರಣವೊಂದರಲ್ಲಿ ಒಂದು ಅಂಕ ಕಳೆದು ಹೋಗಬಹುದು ಎಂಬುದು ಆಕೆಯ ಲೆಕ್ಕಾಚಾರವಾಗಿತ್ತು. ಹಾಗೆಯೇ ಆಗಿದೆ. ಈ ಬಗ್ಗೆ ಆಕೆ ತನ್ನ ತಾಯಿಯ ಬಳಿಯೂ ಈ ಮಾತನ್ನು ಹೇಳಿಕೊಂಡಿದ್ದಳು ಎಂದು ಜಯನಿಯ ತಂದೆ ರೋಹಿನಾಥ್ ಹೇಳಿದ್ದಾರೆ.
‘‘ನಾನು ಮುಂದೆ ಮೆಡಿಕಲ್ ಅಥವಾ ವಾಸ್ತುಶಿಲ್ಪ ಕ್ಷೇತ್ರವನ್ನು ಆಯ್ದುಕೊಳ್ಳಬೇಕೆಂದಿದ್ದೇನೆ. ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ) ವಿಷಯವನ್ನು ಆಯ್ದುಕೊಂಡಿದ್ದೇನೆ. ನಾನು ಇಷ್ಟು ಅಂಕ ಪಡೆಯುವ ನಿರೀಕ್ಷೆ ಇತ್ತಾದರೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುತ್ತೇನೆಂದು ಆಲೋಚನೆ ಮಾಡಿರಲಿಲ್ಲ. ದಿನದಲ್ಲಿ ಕನಿಷ್ಠ ಮೂರರಿಂದ 4 ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೆ. ಉಳಿದಂತೆ ನನಗೆ ಡ್ರಾಯಿಂಗ್, ಸ್ವಿಮ್ಮಿಂಗ್ ಎಂದರೆ ಇಷ್ಟ. ಕ್ರೀಡೆಯಲ್ಲೂ ಆಸಕ್ತಿ ಇದೆ. ಡಿಸ್ಕಸ್ ಎಸೆತದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದಿದ್ದೇನೆ. ಫಲಿತಾಂಶ ಖುಷಿ ಕೊಟ್ಟಿದೆ’’ ಎಂದು ಜಯನಿ ‘ವಾರ್ತಾಭಾರತಿ’ ಜತೆ ಸಂತಸ ಹಂಚಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿರುವ ಗೋಪಿನಾಥ್ ಮಂಗಳೂರಿನಲ್ಲಿ ಸೆಕ್ಯೂರಿಟಿ ಏಜೆನ್ಸಿಯೊಂದನ್ನೂ ನಡೆಸುತ್ತಿದ್ದಾರೆ. ತಾಯಿ ಬಬಿತಾ ಗೃಹಿಣಿ.
‘‘ನನ್ನ ತಂದೆ ಶಿಕ್ಷರಾಗಿದ್ದವರು. ಹಾಗಿದ್ದರೂ ಯಾವತ್ತೂ ನನ್ನ ಮಗಳಿಗೆ ಕಲಿಕೆಗಾಗಿ ಯಾವುದೇ ರೀತಿಯ ಒತ್ತಡ ಹೇರಿರಲಿಲ್ಲ. ಆಕೆಯ ಆಸಕ್ತಿ ಹಾಗೂ ಶ್ರಮವೇ ಆಕೆಯ ಈ ಫಲಿತಾಂಶಕ್ಕೆ ಕಾರಣ. ಜತೆಗೆ ಆಕೆಯ ತಾಯಿ ಆಕೆಗೆ ಸದಾ ಬೆಂಗಾವಲಾಗಿ ನಿಂತಿದ್ದರು’’ ಎಂದು ಜಯನಿ ತಂದೆ ರೋಹಿನಾಥ್ ‘ವಾರ್ತಾಭಾರತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.