ವಾರಣಾಸಿ-ಕೊಲಂಬೊ ನೇರ ವಿಮಾನ : ಲಂಕಾದಲ್ಲಿ ಮೋದಿ ಘೋಷಣೆ
ಕೊಲಂಬೊ, ಮೇ 12: ಭಾರತ ಶ್ರೀಲಂಕಾದ ಸ್ನೇಹಿತನಾಗಿ ಮುಂದುವರಿಯುವುದು ಹಾಗೂ ಆ ದೇಶದ ರಾಷ್ಟ್ರ ನಿರ್ಮಾಣದಲ್ಲಿ ನೆರವು ನೀಡುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೊಲಂಬೊದಲ್ಲಿ ಶುಕ್ರವಾರ ನಡೆದ 14ನೆ ಅಂತಾರಾಷ್ಟ್ರೀಯ ವೆಸಾಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕೊಲಂಬೊ ಮತ್ತು ವಾರಣಾಸಿಯ ನಡುವೆ ನೇರ ವಿಮಾನ ಸಂಪರ್ಕ ಏರ್ಪಡಿಸಲಾಗುವುದು ಎಂಬುದಾಗಿ ಘೋಷಿಸಿದರು.
ಪ್ರಧಾನಿ ಮೋದಿ ವಾರಣಾಸಿಯಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ವಾರಣಾಸಿ ಬುದ್ಧ ಯಾತ್ರಾ ಕೇಂದ್ರ ಬೋಧ್‌ಗಯಾದಿಂದ ಸುಮಾರು 250 ಕಿ.ಮೀ. ದೂರದಲ್ಲಿದೆ.
‘‘2017 ಆಗಸ್ಟ್‌ನಿಂದ ಏರ್ ಇಂಡಿಯಾವು ಕೊಲಂಬೊ ಮತ್ತು ವಾರಣಾಸಿ ನಡುವೆ ನೇರ ವಿಮಾನಗಳನ್ನು ಹಾರಿಸುವುದು. ಇದು ಶ್ರೀಲಂಕಾದಿಂದ ಕಾಶಿ ವಿಶ್ವನಾಥನ ನೆಲೆ ವಾರಣಾಸಿಗೆ ಪ್ರಯಾಣಿಸುವ ಸಹೋದರರು ಮತ್ತು ಸಹೋದರಿಯರ ಪ್ರಯಾಣವನ್ನು ಸುಗಮಗೊಳಿಸುತ್ತದೆ’’ ಎಂದು ಮೋದಿ ನುಡಿದರು.
ಭಾರತ ಮತ್ತು ಶ್ರೀಲಂಕಾಗಳ ಸ್ನೇಹ ಪ್ರಾಚೀನವಾದುದಾಗಿದೆ ಹಾಗೂ ನಮ್ಮ ಬಾಂಧವ್ಯ ಹಲವು ಮಜಲುಗಳಲ್ಲಿ ಹರಡಿಕೊಂಡಿದೆ ಎಂದು ಪ್ರಧಾನಿ ಹೇಳಿದರು.