ದ.ಕ.: 18 ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಬೆಳಕಿಗೆ: ಪ್ರೊ. ಎಸ್.ಜಿ. ಸಿದ್ದರಾಮಯ್ಯ
ಮಂಗಳೂರು , ಮೇ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ಅನುಮತಿ ಇಲ್ಲದೆ ಕನ್ನಡ ಶಾಲೆಗಳ ಆವರಣದ ಕಟ್ಟಡದಲ್ಲಿ ಕನ್ನಡದ ಬದಲಿಗೆ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ 18 ಶಾಲೆಗಳಲ್ಲಿ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಇಂತಹ ವ್ಯವಸ್ಥೆಯನ್ನು ತಕ್ಷಣ ಮುಚ್ಚಿಸುವ ಜತೆಗೆ ಕ್ರಮ ಕೈಗೊಂಡಿರುವ ಸಂಪೂರ್ಣ ಮಾಹಿತಿಯೊಂದಿಗೆ 15 ದಿನಗಳೊಳಗೆ ವರದಿ ನೀಡುವಂತೆ ದ.ಕನ್ನಡ ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ. ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಅನುಷ್ಟಾನದ ಬಗ್ಗೆ ದ..ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಅನುಮತಿ ಇಲ್ಲ. ಆದರೂ ದ.ಕನ್ನಡ ಕೆಲವು ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತೆರೆಯಲಾಗಿದೆ. ಸರಕಾರದ ಗಮನಕ್ಕೆ ಬಾರದೆ ಖಾಸಗಿಯವರು ಕಟ್ಟಡವನ್ನೂ ಕಟ್ಟಿಕೊಂಡು ಖಾಸಗಿ ಶಿಕ್ಷಕರನ್ನು ನೇಮಕ ಮಾಡಿ ಇಂಗ್ಲೀಷ್‌ನಲ್ಲಿ ಬೋಧನೆ ಮಾಡುತ್ತಿದ್ದಾರೆ. ಇದಕ್ಕೆ ಅನುಮತಿ ನೀಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಬರೆಯಲಾಗುವುದು ಎಂದರು.
ಯಾವುದೇ ರೀತಿಯ ಖಾಸಗಿ ವಲಯದ ದಾನ ಅಥವಾ ದತ್ತಿ ಸಹಾಯವನ್ನು ಕೂಡಾ ಮೇಲಧಿಕಾರಿಗಳ ಗಮನಕ್ಕೆ ತಂದೇ ಸರಕಾರಿ ಜಾಗದೊಳಗೆ ಮಾಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಆ ಪ್ರಕ್ರಿಯೆಯನ್ನು ಮಾಡಲಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಕ್ಷಣ ಕಾರ್ಯದರ್ಶಿಗೆ ತಿಳಿಸಿದಾಗ ಅವರೂ ಆಘಾತ ವ್ಯಕ್ತಪಡಿಸಿ ಸಿಇಒ ಹಾಗೂ ಡಿಸಿಯವರ ಗಮನಕ್ಕೂ ತರಲಾಗಿದೆ. ವಿಶೇಷವೆಂದರೆ ಪ್ರಕ್ರಿಯೆ ಬಗ್ಗೆ ಡಿಡಿಪಿಐ ಅವರ ಗಮನಕ್ಕೆ ಬಂದಿದ್ದರೂ ಸಬೂಬು ಹೇಳಿಕೊಂಡು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಎಂಬ ನೆಲೆಯಲ್ಲಿ ಅವರಿಗೂ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರೆ.
ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಬದಲಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಿ, ಖಾಸಗಿಯವರು ಅವ್ಯವಹಾರದ ನಡೆಸುತ್ತಿರುವ ವಾತಾವರಣ ಕನ್ನಡವನ್ನು ನಾಶ ಮಾಡಿ ಇಂಗ್ಲಿಷ್ ಭಾಷೆ ಬೆಳವಣಿಗೆಯ ಪ್ರೋತ್ಸಾಹದ ನಡೆಯಾಗಿದೆ. ಇದನ್ನು ರಾಜ್ಯ ಸರಕಾರ ಸಹಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆರ್‌ಟಿಇ ಕಾನೂನಿನಿಂದ ಕನ್ನಡ ಶಾಲೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಿಸಿದ ಪ್ರೊ. ಸಿದ್ಧರಾಮಯ್ಯ ಶಿಕ್ಷಣ ಸರಕಾರದ ಸ್ವಾಮ್ಯದಲ್ಲಿರಬೇಕು ಖಾಸಗಿ ವ್ಯವಸ್ಥೆ ಇರಬಾರದು ಎಂದರು.
ವೆಬ್‌ಸೈಟ್‌ಗಳಲ್ಲಿ ಕನ್ನಡ ಬಳಕೆಗೆ ಸೂಚನೆ
ದ.ಕನ್ನಡ ಜಿಲ್ಲೆಯಲ್ಲಿ ಸರಕಾರದ ಬಹುತೇಕ ಇಲಾಖೆಗಳ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವು 2ನೆ ಆದ್ಯತೆಯಾಗಿ ಮಾತ್ರ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕನ್ನಡವು ಆಡಳಿತ ವ್ಯವಸ್ಥೆಯೊಳಗೆ ಪ್ರಥಮ ಆದ್ಯತೆಯಾಗಿ ಬಳಕೆಯಾಗಬೇಕು ಎಂಬ ಸರಕಾರದ ಸೂಚನೆ ಇದೆ. ಹಾಗಿದ್ದರೂ ತಂತ್ರಾಂಶಗಳಿಗೆ ಕನ್ನಡ ಭಾಷೆ ಒಗ್ಗುವುದಿಲ್ಲ ಎಂಬ ಮನೋಸ್ಥಿತಿ ಅಧಿಕಾರಿಗಳಲ್ಲಿ ಇದೆ. ಇದರಿಂದ ಹೊರಬರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪತ್ರಿಕಾಗೋಷ್ಠಿಗೆ ಮೊದಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ.ಸಿಇಒ ಡಾ. ಎಂ.ಆರ್. ರವಿ , ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ಪ್ರಾಧಿಕಾರದ ಕಾರ್ಯದರ್ಶಿ ಡಾ. ಮುರಲೀಧರ್, ಸದಸ್ಯರಾದ ಚಂದ್ರಶೇಖರ ದಾಮ್ಲೆ , ಡಾ. ಚಂದ್ರಕಲಾ ನಂದಾವರ, ವಿಜಯಲಕ್ಷ್ಮೀ ಬಿ.ಶೆಟ್ಟಿ ಉಪಸ್ಥಿತರಿದ್ದರು.
ಪೂರ್ವಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಿಫಾರಸ್ಸು
ಕೆಲವು ಸರಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಕನ್ನಡ ಚಿಣ್ಣರ ಮನೆಯನ್ನು ಆರಂಭಿಸಲಾಗಿದೆ. ಇದು ಮಕ್ಕಳಲ್ಲಿ ಅಕ್ಷರ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇವುಗಳು ಎಲ್‌ಕೆಜಿ, ಯುಕೆಜಿ ರೀತಿಯಲ್ಲೇ ಕಾರ್ಯನಿರ್ವಹಿಲಿವೆ ಮತ್ತು ಮುಂದೆ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ನಿಟ್ಟಿನಲ್ಲಿ ಪೂರಕವಾಗಲಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರುವಂತೆ ಪ್ರಾಧಿಕಾರದ ಕನ್ನಡ ಸಬಲೀಕರಣ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.