ಮಹಿಳೆಯ ಮಾನಭಂಗಕ್ಕೆ ಯತ್ನ: ಆರೋಪಿಗೆ ಜಾಮೀನು
ಪುತ್ತೂರು, ಮೇ 12: ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿನ ಫಾಸ್ಟ್‌ಪುಡ್ ಅಂಗಡಿಯೊಳಗಿದ್ದ ಮಹಿಳೆಯೊಬ್ಬರ ಮಾನ ಭಂಗಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ನರಿಮೊಗರು ಗ್ರಾಮದ ಒತ್ತೆಮುಂಡೂರು ನಿವಾಸಿ ಪ್ರಶಾಂತ್ ಕುಮಾರ್ (27) ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಆರೋಪಿ. ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡುಗುಡ್ಡೆ ನಿವಾಸಿ ಶೇಸಪ್ಪ ಪುರುಷ ಎಂಬವರು ಫಾಸ್ಟ್‌ಪುಡ್ ಅಂಗಡಿ ವ್ಯವಹಾರ ನಡೆಸುತ್ತಿದ್ದು, ಕಳೆದ ಸೋಮವಾರ ಆರೋಪಿ ಪ್ರಶಾಂತ್ ಕುಮಾರ್ ಶೇಸಪ್ಪ ಪುರುಷ ಅವರ ಪತ್ನಿ ವಾಣಿ ಅಂಗಡಿಯೊಳಗಿದ್ದ ವೇಳೆ ಮೈಮೇಲೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ನೀಡಲಾದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಯ ಪರವಾಗಿ ನ್ಯಾಯಾಲಯದಲ್ಲಿ ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ವಾದಿಸಿದ್ದರು.