ಪಿಯುಸಿ: ಉಡುಪಿ ಜಿಲ್ಲೆಯ 7 ಕಾಲೇಜುಗಳಿಗೆ ಶೇ.100 ಫಲಿತಾಂಶ
ಉಡುಪಿ, ಮೇ 12: ಸತತ ಮೂರು ವರ್ಷಗಳ ಪ್ರಯತ್ನದ ಬಳಿಕ, ಗುರುವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅಗ್ರಸ್ಥಾನವನ್ನಲಂಕರಿಸಿದ ಉಡುಪಿ ಜಿಲ್ಲೆಯ ಏಳು ಪದವಿ ಪೂರ್ವ ಕಾಲೇಜುಗಳು ಈ ಬಾರಿಯೂ ಶೇ.100 ಫಲಿತಾಂಶವನ್ನು ದಾಖಲಿಸಿವೆ.
ಕಳೆದ ಸಲದಂತೆ ಈ ಬಾರಿ ಸಹ ಜಿಲ್ಲೆಯ ಏಳು ಕಾಲೇಜುಗಳು ಶೇ.100 ಫಲಿತಾಂಶ ಪಡೆದಿವೆ. ಆದರೆ ಕಳೆದ ಬಾರಿ ಮೂರು ಸರಕಾರಿ ಹಾಗೂ ನಾಲ್ಕು ಖಾಸಗಿ ಪ.ಪೂ.ಕಾಲೇಜುಗಳು ಈ ಸಾಧನೆ ಮಾಡಿದ್ದರೆ, ಈ ಬಾರಿ ಕೇವಲ ಒಂದು ಸರಕಾರಿ ಕಾಲೇಜು ಮಾತ್ರ ಈ ಸಾಧನೆ ಮಾಡಿದೆ. ಉಳಿದ ಆರು ಕಾಲೇಜುಗಳು ಖಾಸಗಿ ಆಡಳಿತಕ್ಕೊಳಪಟ್ಟವುಗಳಾಗಿವೆ.
ಸರಕಾರಿ ಪ.ಪೂ. ಕಾಲೇಜು ಮುದರಂಗಡಿ (24 ವಿದ್ಯಾರ್ಥಿಗಳು) ಈ ಸಾಧನೆ ಮಾಡಿದ ಏಕೈಕ ಸರಕಾರಿ ಸಂಸ್ಥೆ. ಉಳಿದಂತೆ ಸಾಲಿಹಾತ್ ಪದವಿ ಪೂರ್ವ ಕಾಲೇಜು ಹೂಡೆ (30), ವಾಗ್ದೇವಿ ಪ.ಪೂ.ಕಾಲೇಜು ಉಡುಪಿ (5), ಅಮೃತ ಭಾರತಿ ಪ.ಪೂ.ಕಾಲೇಜು ಹೆಬ್ರಿ (260), ಎಸ್.ಆರ್.ಪ.ಪೂ. ಕಾಲೇಜು ಹೆಬ್ರಿ (134), ಎಸ್.ಎನ್.ವಿ.ಪ.ಪೂ.ಕಾಲೇಜು ಕಾರ್ಕಳ (47), ಹಾಗೂ ಸೇಂಟ್ ಥಾಮಸ್ ಪ.ಪೂ.ಕಾಲೇಜು ಬೈಂದೂರು (19) ಈ ಸಾಧನೆ ಮಾಡಿದ ಕಾಲೇಜುಗಳಾಗಿವೆ. ಇವುಗಳಲ್ಲಿ ಸೇಂಟ್ ಥಾಮಸ್ ಪ.ಪೂ. ಕಾಲೇಜು ಕಳೆದ ವರ್ಷವೂ ಶೇ.100 ಸಾಧನೆ ಮಾಡಿದೆ.
ಅಗ್ರಸ್ಥಾನಿಗರು: ಜಿಲ್ಲೆಯ ಮೂರು ವಿಭಾಗಗಳಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಹೀಗಿದೆ.
ವಿಜ್ಞಾನ ವಿಭಾಗ: 1.ರಾಧಿಕಾ ಎಂ.ಪೈ, ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜು ಗಂಗೊಳ್ಳಿ (596ಅಂಕ), 2.ಪೃಥ್ವಿ ಎಸ್., ಜ್ಞಾನಸುಧಾ ಪದವಿ ಪೂರ್ವ ಕಾಲೇಜು (593), 3.ಅನುಷಾ ಬಿ.ಪೈ, ವಿವೇಕ ಪ.ಪೂ.ಕಾಲೇಜು ಕೋಟ (591), 3.ಅನಿಲ್ ಪ್ರಭು, ಜ್ಞಾನಸುಧಾ ಪ.ಪೂ.ಕಾಲೇಜು, ಕಾರ್ಕಳ (591).
ವಾಣಿಜ್ಯ ವಿಭಾಗ: 1.ಉತ್ಪಲಾ ಶೆಣೈ, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ (593), 2. ರಕ್ಷಾ ಕೆ.ಎನ್., ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ (592), 3.ಸ್ವಾತಿ ಕಿಣಿ, ಜ್ಞಾನಸುಧಾ ಪ.ಪೂ.ಕಾಲೇಜು ಕಾರ್ಕಳ (590).
ಕಲಾ ವಿಭಾಗ: 1.ಅದಿತಿ ಕಿರಣ್, ಎಂಜಿಎಂ ಪ.ಪೂ.ಕಾಲೇಜು ಉಡುಪಿ (577), 2.ಗಾಯತ್ರಿ ಎ., ವಿವೇಕ ಪ.ಪೂ.ಕಾಲೇಜು ಕೋಟ (571), 3. ಎನ್.ಪವಿತ್ರಾ, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಅದಮಾರು (562).
ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ಬರೆದ 14,662 ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 13,197 ಮಂದಿ ತೇರ್ಗಡೆಗೊಂಡು ಶೇ.90.01 ಸಾಧನೆ ಮಾಡಿ ರಾಜ್ಯದಲ್ಲಿ ಅಗ್ರಸ್ಥಾನವನ್ನು ಪಡೆಯಲಾಗಿದೆ. ಖಾಸಗಿಯಾಗಿ ಪರೀಕ್ಷೆ ಬರೆದ 1642 ವಿದ್ಯಾರ್ಥಿಗಳಲ್ಲಿ 578 ತೇರ್ಗಡೆಗೊಂಡು ಶೇ.35.02 ಮಂದಿ ಹಾಗೂ ಮರು ಪರೀಕ್ಷೆ ಬರೆದ 98 ಮಂದಿಯಲ್ಲಿ 24ಮಂದಿ ತೇರ್ಗಡೆಗೊಂಡು ಶೇ.24.49 ಮಂದಿ ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 16,402 ಮಂದಿಯಲ್ಲಿ 13,799 ಮಂದಿ ತೇರ್ಗಡೆಗೊಂಡು ಶೇ.84.13 ಸಾಧನೆ ಮಾಡಲಾಗಿದೆ.
ಬಾಲಕಿಯರ ಮೇಲುಗೈ: ಜಿಲ್ಲೆಯಲ್ಲಿ ಈ ಬಾರಿಯೂ ಉತ್ತೀರ್ಣತೆಯಲ್ಲಿ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. 7911 ಮಂದಿ ಬಾಲಕರಲ್ಲಿ 6267 ಮಂದಿ (ಶೇ.79.22) ಉತ್ತೀರ್ಣರಾದರೆ, 8491 ಬಾಲಕಿಯರಲ್ಲಿ 7532 (88.71) ಮಂದಿ ತೇರ್ಗಡೆಗೊಂಡಿದ್ದಾರೆ. ಆಂಗ್ಲ ಮಾಧ್ಯಮದ ಶೇ.87.49 ಮಂದಿ ಹಾಗೂ ಕನ್ನಡ ಮಾಧ್ಯಮದ ಶೇ.60.44 ಮಂದಿ, ಪರಿಶಿಷ್ಟ ಜಾತಿಯ ಶೇ.73.08 ಮಂದಿ ಹಾಗೂ ಪರಿಶಿಷ್ಟ ಪಂಗಡದ ಶೇ.80.26 ಮಂದಿ ಉತ್ತೀರ್ಣಗೊಂಡವರಲ್ಲಿ ಸೇರಿದ್ದಾರೆ.
ಗ್ರಾಮೀಣದವರೇ ಜಾಣರು: ಕಳೆದ ಬಾರಿಗೆ ವ್ಯತಿರಿಕ್ತವಾಗಿ ಈ ಬಾರಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಗ್ರಾಮೀಣ ಪ್ರದೇಶದ 8775 ವಿದ್ಯಾರ್ಥಿಗಳಲ್ಲಿ 7476 ಮಂದಿ (ಶೇ.85.2) ಹಾಗೂ ನಗರ ಪ್ರದೇಶದ 7627 ವಿದ್ಯಾರ್ಥಿಗಳಲ್ಲಿ 6323 ಮಂದಿ (ಶೇ.82.9) ಮಂದಿ ತೇರ್ಗಡೆಗೊಂಡಿದ್ದಾರೆ. ಆದರೆ ರೆಗ್ಯುಲರ್ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡಾಗ ನಗರಪ್ರದೇಶದವರೇ (90.13), ಗ್ರಾಮೀಣದವರಿಗಿಂತ (ಶೇ.89.91) ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿದ್ಯಾರ್ಥಿಗಳ ಮೇಲುಗೈ: ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಅಧಿಕ ಸಂಖ್ಯೆಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಪರೀಕ್ಷೆ ಬರೆದ ವಿಜ್ಞಾನ ವಿಭಾಗದ 5274 ವಿದ್ಯಾರ್ಥಿಗಳಲ್ಲಿ 4746 (ಶೇ.89.99) ಮಂದಿ ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದ 8966 ವಿದ್ಯಾರ್ಥಿಗಳಲ್ಲಿ 7665 ಮಂದಿ (ಶೇ.85.49) ತೇರ್ಗಡೆಗೊಂಡಿ ದ್ದಾರೆ. ಇನ್ನು ಕಲಾ ವಿಭಾಗದ 2162 ಮಂದಿಯಲ್ಲಿ 1388 (ಶೇ.64.02) ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಗೊಂಡಿದ್ದಾರೆ ಎಂದು ಡಿಡಿಪಿಯು ಆರ್.ಬಿ.ನಾಯಕ್ ತಿಳಿಸಿದ್ದಾರೆ.
ಕಾಂಗ್ರೆಸ್ ಅಭಿನಂದನೆ: ಈ ಬಾರಿಯ ಪಿಯುಸಿ ಹಾಗೂ ಎಸ್ಸೆಸೆಲ್ಸಿ ಪರೀಕ್ಷೆ ಗಳೆರಡರಲ್ಲೂ ಉಡುಪಿ ಜಿಲ್ಲೆ ಮತ್ತೆ ಅಗ್ರಸ್ಥಾನ ಪಡೆದಿರುವ ಬಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಂಬಂಧಿತ ಎಲ್ಲರನ್ನೂ ಅಭಿನಂದಿಸಿದೆ. ಇದಕ್ಕಾಗಿ ಶ್ರಮಿಸಿದ ಇಲಾಖೆಯ ಅಧಿಕಾರಿಗಳಿಗೆ, ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಹೇಳಿದೆ.
ಸಚಿವ ಪ್ರಮೋದ್ ಅಭಿನಂದನೆ: ಜಿಲ್ಲೆಯು ಈ ಬಾರಿಯ ಪಿಯುಸಿ ಹಾಗೂ ಎಸ್ಸೆಸೆಲ್ಸಿ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿರುವುದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಇದಕ್ಕಾಗಿ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ, ಶಿಕ್ಷಕ ವೃಂದದವರಿಗೆ, ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೆ, ಮುಖ್ಯೋಪಾಧ್ಯಯರುಗಳಿಗೆ, ಶಾಲಾಭಿವೃದ್ಧಿ ಸಮಿತಿಗೆ, ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಿಜೆಪಿ ಅಭಿನಂದನೆ: ಈ ಬಾರಿಯ ಅವಳಿ ಪರೀಕ್ಷೆಗಳಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಹಿತ ಅನೇಕ ರ್ಯಾಂಕ್‌ಗಳನ್ನು ಪಡೆದಿರುವುದಕ್ಕೆ ಸಹ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.