×
Ad

ಎಸೆಸೆಲ್ಸಿ: ಸರಕಾರಿ ಶಾಲೆಯ ವಿದ್ಯಾರ್ಥಿಗಳಿಬ್ಬರು ಉಡುಪಿ ಜಿಲ್ಲೆಗೆ ಪ್ರಥಮ

Update: 2017-05-12 21:34 IST

ಉಡುಪಿ, ಮೇ 12: ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಬ್ಬರು 622 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗುವ ಮೂಲಕ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.

ಉಪ್ಪುಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ರಂಜಿತಾ ಆಚಾರ್ಯ ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಮಂಜೇಶ್ ಶೇರಿಗಾರ್ ಸಾಧನೆ ಮಾಡಿದ ವಿದ್ಯಾರ್ಥಿಗಳು.

ಉಪ್ಪುಂದದ ರಮೇಶ್ ಆಚಾರ್ಯ ಹಾಗೂ ಸಂಗೀತ ಆಚಾರ್ಯ ದಂಪತಿಯ ಮೂವರು ಮಕ್ಕಳಲ್ಲಿ ರಂಜಿತಾ ಹಿರಿಯಳು. ರಮೇಶ್ ಆಚಾರ್ಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಸಂಗೀತ ಗೃಹಿಣಿ. 

ರಂಜಿತಾ ಟ್ಯೂಷನ್‌ಗೆ ಹೋಗದೆ ಮನೆಯಲ್ಲಿ ಪ್ರತಿದಿನ 4-5 ಗಂಟೆಗಳ ಕಾಲ ಓದಿ ಈ ಸಾಧನೆ ಮಾಡಿದ್ದಾಳೆ. ಕನ್ನಡದಲ್ಲಿ 125, ಇಂಗ್ಲಿಷ್ ನಲ್ಲಿ 100, ಹಿಂದಿಯಲ್ಲಿ 99, ವಿಜ್ಞಾನದಲ್ಲಿ 99, ಗಣಿತದಲ್ಲಿ 100, ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾಳೆ.

‘ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ದಿನಕ್ಕೆ 4ರಿಂದ 5 ಗಂಟೆಗಳ ಕಾಲ ಓದುತ್ತಿದ್ದೆ. ಮುಂದೆ ಪಿಯುಸಿ ಯಲ್ಲಿ ವಿಜ್ಞಾನ ವಿಭಾಗ ಪಡೆದು ಡಾಕ್ಟರ್ ಆಗಿ ಐಎಎಸ್ ಓದಬೇಕೆಂಬ ಗುರಿಯನ್ನು ಹೊಂದಿದ್ದೇನೆ’ ಎಂದು ರಂಜಿತಾ ಪತ್ರಿಕೆಗೆ ತಿಳಿಸಿದರು.

ಐಎಎಸ್ ಆಗುವಾಸೆ: ಶಿರೂರು ಹಡವಿನಕೋಣೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮಹಾಬಲೇಶ್ವರ ಶೇರಿಗಾರ್ ಹಾಗೂ ಶಿರೂರು ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀದೇವಿ ದಂಪತಿಯ ಪುತ್ರ ಬೈಂದೂರಿನ ಮಂಜೇಶ್ ಎಸೆಸೆಲ್ಸಿಯಲ್ಲಿ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಂಜೇಶ್ ಕನ್ನಡದಲ್ಲಿ 124, ಇಂಗ್ಲಿಷ್‌ನಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದಾನೆ. ಈತ ಓದುವುದರಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಸ್ಕೂಲ್ ಚಾಂಪಿಯನ್ ಆಗಿ ಮೂಡಿಬಂದಿದ್ದಾನೆ. ಅದೇ ರೀತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾನೆ. ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದಲ್ಲಿ ಮೂರನೆ ಸ್ಥಾನ ಪಡೆದಿದ್ದಾನೆ.

‘ಟ್ಯೂಷನ್ ತರಗತಿಗೆ ಹೋಗದೆ, ಮನೆಯಲ್ಲೂ ಹೆಚ್ಚು ಸಮಯ ಓದದೆ ಕೇವಲ ತರಗತಿ ಪಾಠವನ್ನು ಗಮನವಿಟ್ಟು ಕೇಳಿ ಪರೀಕ್ಷೆ ಬರೆದಿದ್ದೇನೆ. ಇದ ರಿಂದಾಗಿ ಇಷ್ಟು ಅಂಕ ಪಡೆಯಲು ನನಗೆ ಸಾಧ್ಯವಾಯಿತು. ಮುಂದೆ ಪಿಯುಸಿ ಯಲ್ಲಿ ವಿಜ್ಞಾನ ಪಡೆದು ಐಎಎಸ್ ಆಗಬೇಕೆಂಬ ಆಸೆ ನನ್ನದು’ ಎಂದು ಮಂಜೇಶ್ ಪತ್ರಿಕೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News