ಜಲೀಲ್ ಕರೋಪಾಡಿ ಹತ್ಯೆ: ಸಿಐಡಿ ತನಿಖೆಗೆ ಎಸ್‌ಡಿಪಿಐ ಒತ್ತಾಯ

Update: 2017-05-12 17:44 GMT

ವಂಗಳೂರು, ಮೇ 12: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿಯವರ ಹತೈಯ ಸತ್ಯಾಸತ್ಯತೆ ಹೊರಬೀಳಲು ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಎಸ್‌ಡಿಪಿಐ ಒತ್ತಾಯಿಸಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜಲೀಲ್ ಹತ್ಯೆಯು ಸಂಘಟಿತ ಸಂಚಿನ ಕೃತ್ಯವಾಗಿದ್ದು, ಸಮಾಜದಲ್ಲಿ ಗಲಭೆ ಸೃಷ್ಟಿಸುವ ಪಿತೂರಿಯಾಗಿದೆ. ಹಾಡಹಗಲೇ ಪಂಚಾಯತ್ ಕಚೇರಿಯ ಒಳಗೆ ನುಗ್ಗಿ ಆರೋಪಿಗಳು ಜನಪ್ರತಿನಿಧಿಯ ಕೊಲೆ ನಡೆಸಿದ್ದು ಸಮಾಜವನ್ನು ಬೆಚ್ಚಿ ಬೀಳಿಸಿದೆ. ಆದ್ದರಿಂದ ಹತ್ಯೆಯ ಸತ್ಯಾಸತ್ಯತೆ ಹೊರಬರಬೇಕಾದರೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕು. ಅಲ್ಲದೆ, ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 11 ಮಂದಿ ಅರೋಪಿಗಳನ್ನು ಬಂಧಿಸಿದ್ದರೂ ಕೊಲೆಗೆ ಸಂಚು ರೂಪಿಸಿದ ಸಂಘಟನೆಯ ಹೆಸರನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಆರೋಪಿಗಳೆಲ್ಲರೂ ಸಂಘಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಕೊಲೆ ಕೃತ್ಯವನ್ನು ಸಂಘಪರಿವಾರದ ಕಾರ್ಯಕರ್ತರು ನಡೆಸಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೂ ಪೊಲೀಸರು ಕೊಲೆ ಕೃತ್ಯವನ್ನು ಭೂಗತ ನಂಟಿನೊಂದಿಗೆ ಜೋಡಿಸಿ ಪ್ರಕರಣವು ಯುಎಪಿಎ ಕಾಯ್ದೆಯಡಿ ದಾಖಲಾಗದಂತೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ  ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಅಕ್ರಮ ಸಂಚಿನ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಂಘಪರಿವಾರದ ಕಾರ್ಯಕರ್ತರು ತಲೆಮರಿಸಿಕೊಂಡಿದ್ದರೂ ಅವರ ಬಗ್ಗೆ ಯಾವುದೇ ಮಾಹಿತಿಗಳು ಅಥವಾ ಫೊಟೊಗಳು ಪೊಲೀಸ್ ಠಾಣೆಗಳಲ್ಲಿಲ್ಲ. ಆದರೆ ಕೆಲವು ಆರೋಪಗಳಿರುವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳ ಫೊಟೊ, ಹೆಸರುಗಳು ಪೊಲೀಸ್ ಠಾಣೆಗಳ ಎದುರುಗಡೆ ರಾರಾಜಿಸುತ್ತಿವೆ. ಅಲ್ಲದೆ ಹಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಇದು ಪೊಲೀಸರು ನಡೆಸುವ ಕಾನೂನಿನ ತಾರತಮ್ಯ ನೀತಿಯಾಗಿದೆ. ಇಷ್ಟೆಲ್ಲಾ ನಡೆಯುವಾಗಲೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮೌನ ವಹಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಮುಸ್ಲಿಂ ವಿರೋಧಿ ನೀತಿಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹನೀಫ್ ಕೊಡಾಜೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಎಂ.ಕೂಸಪ್ಪ, ಜಲೀಲ್ ಕೃಷ್ಣಾಪುರ ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹಾರಿಸ್ ಮಲಾರ್, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News