×
Ad

ಕ್ರೀಡೆಯಿಂದ ಏಕತೆ: ಸಚಿವ ಯು.ಟಿ.ಖಾದರ್

Update: 2017-05-13 16:46 IST

 ಬಂಟ್ವಾಳ, ಮೇ 13: ಕ್ರೀಡೆಯಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಒಟ್ಟು ಸೇರಿ ಭಾಗವಹಿಸಿದಾಗ ಸಮಾಜದಲ್ಲಿ ಏಕತೆಯನ್ನು ಸೃಷ್ಟಿಸಲು ಸಾಧ್ಯವಾಗುವುದಲ್ಲದೆ ಕ್ರೀಡಾಪಟುಗಳ ವ್ಯಕ್ತಿತ್ವ ವಿಕಶನ ಮತ್ತು ಜೀವನ ಮಟ್ಟವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಪುದು ವಲಯ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಶನಿವಾರದಿಂದ 5 ದಿನಗಳ ಕಾಲ ನಡೆಯುವ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದ ಅವರು ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರಜಾ ಸಮಯದಲ್ಲಿ ಯುವ ಜನಾಂಗ ಸಮಯವನ್ನು ವ್ಯರ್ಥ ಮಾಡದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಹೊರ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಇದಕ್ಕೆ ಅವಕಾಶ ಮಾಡಿಕೊಟ್ಟ ಹಾಗೂ ಎಲ್ಲಾ ಜಾತಿ, ಧರ್ಮದವರನ್ನು ಈ ಪಂದ್ಯಾಕೂಟದಲ್ಲಿ ಭಾಗವಹಿಸುವಂತೆ ಮಾಡಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಪ್ರೀತಿ ವಿಶ್ವಾಸದಿಂದ ಆಡುವಂತೆ ಅವಕಾಶ ಮಾಡಿಕೊಟ್ಟ ಪುದು ವಲಯ ಯುವ ಕಾಂಗ್ರೆಸ್‌ನ ಕಾರ್ಯ ಶಾಘ್ಲನೀಯವಾಗಿದೆ ಎಂದು ಅವರು ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಉಮರ್ ಫಾರೂಕ್, ಯು.ಟಿ.ಖಾದರ್‌ರವರು ಶಾಸಕರಾಗಿ, ಸಚಿವರಾಗಿ ಆಯ್ಕೆಯಾದ ಬಳಿಕ ಪುದು ಗ್ರಾಮದ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ. ಸಚಿವರ ಮುತುವರ್ಜಿಯಿಂದ ಗ್ರಾಮದ ಎಲ್ಲಾ ರಸ್ತೆಗಳು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿಗೊಂಡಿವೆ. ಎಂಐಎಂ ಯೋಜನೆಯಡಿ ಕುಂಜತ್ಕಲದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಹಾಗೂ ಒಳ ಚರಂಡಿ, ಪೇರಿಮಾರಿನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಈಗಾಗಲೇ ಆಗಿದೆ. ಗ್ರಾಮ ವಿಕಾಶ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಪುದು ಗ್ರಾಮಕ್ಕೆ ಉತ್ತಮ ಅನುದಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಫರಂಗಿಪೇಟೆ ಜಂಕ್ಷನ್‌ನಿಂದ ಕ್ರೀಡೆ ನಡೆಯುವ ಮೈದಾನದವರೆಗೆ ಕ್ರೀಡಾ ಜಾಥ ನಡೆಯಿತು.

ವೇದಿಕೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಉದ್ಯಮಿ ಗಿರೀಶ್ ಬೆಂಗಳೂರು, ಪುದು ಗ್ರಾಪಂ ಅಧ್ಯಕ್ಷ ಆತಿಕಾ, ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ತಾಪಂ ಸದಸ್ಯೆ ಪ್ರದ್ಮಶ್ರೀ ದುರ್ಗೇಶ್ ಶೆಟ್ಟಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಬಾವ, ಸಿ.ಎಂ.ಫಾರೂಕ್, ರಿಯಾಝ್ ಪಾವೂರು, ಮುಸ್ತಫಾ ಪಾವೂರು, ಇಮ್ತಿಯಾರ್ ಆಲ್ಫಾ, ಇಬ್ರಾಹೀಂ ತುಂಬೆ, ಪ್ರವೀಣ್ ತುಂಬೆ, ರವೂಫ್, ಆಸಿಫ್ ಮೇಲ್ಮನೆ, ಗ್ರಾಪಂ ಸದಸ್ಯರಾದ ಲತೀಫ್, ಝಾಹಿರ್, ರಮ್ಲಾನ್, ಇಮ್ರಾನ್ ಸುಜೀರ್, ಗ್ರಾಪಂ ಮಾಜಿ ಅಧ್ಯಕ್ಷ ಅಖ್ತರ್ ಹುಸೈನ್, ಸಲೀಂ, ಮುಸ್ತಫಾ ಅಮೆಮಾರ್, ಅನ್ಸಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News