‘ಅಕ್ವಾ ಅಕ್ವೇರಿಯಾ ಇಂಡಿಯಾ’ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ಮೇ 13: ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಅಧೀನದ ಮೆರೈನ್ ಪ್ರೊಡಕ್ಟ್ಸ್ ಎಕ್ಸ್‌ಪೋರ್ಟ್ ಡೆವಲಪ್‌ಮೆಂಟ್ ಅಥಾರಿಟಿ (ಎಂಪೆಡಾ) ಅಖಿಲ ಭಾರತ ಮಟ್ಟದ ನಾಲ್ಕನೆ ಆವೃತ್ತಿಯ ‘ಅಕ್ವಾ ಅಕ್ವೇರಿಯಾ ಇಂಡಿಯಾ’ ಎಂಬ ಮೂರು ದಿನಗಳ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ.
ನಗರದ ನೆಹರೂ ಮೈದಾನದ ವಿಶಾಲ ವೇದಿಕೆಯಲ್ಲಿ ಮಂಗಳೂರಿನಲ್ಲಿ ಮೇ 14ರಿಂದ 16ರ ತನಕ ಪ್ರದರ್ಶನ ನಡೆಯಲಿದ್ದು, ಸಮುದ್ರ ಹಾಗೂ ಸಿಹಿ ನೀರಿನ ಮೀನುಗಾರಿಕೆ ಬಗ್ಗೆ ಮಾಹಿತಿಯನ್ನು ಒದಗಿಸಿದೆ ಎಂದು ಸಂಸದ ನಳಿನ್ ಕುಮಾರ್‌ಕಟೀಲ್ ತಿಳಿಸಿದರು.
ಅಕ್ವಾ ಅಕ್ವೇರಿಯಾ ಇಂಡಿಯಾ ಪ್ರದರ್ಶನದಲ್ಲಿ ಸಿಹಿ ನೀರಿನ ಮೀನು ಕೃಷಿಕರು, ಮೀನು ಮರಿಗಳ ನಿರ್ವಾಹಕರು, ಮೀನಿನ ಆಹಾರ ಉತ್ಪಾದಕರು, ಮೀನು ಉತ್ಪಾದಕರು ಮತ್ತು ಪೂರೈಕೆದಾರರು, ಅಲಂಕಾರಿನ ಮೀನು ಉತ್ಪಾದಕರು, ವಿಶ್ವದ ಪ್ರಸಿದ್ಧ ತಾಂತ್ರಿಕ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಮಂಗಳೂರು ನೆಹರೂ ಮೈದಾನದಲ್ಲಿ ಹಾಕಿರುವ ಸುಸಜ್ಜಿತ ಹವಾನಿಯಂತ್ರಿತ ವಿಶಾಲ ಪೆಂಡಾಲ್‌ನಲ್ಲಿ ಈ ಪ್ರದರ್ಶನ ನಡೆಯಲಿದೆ.
ಮೇ 14ರಂದು ಬೆಳಗ್ಗೆ ನಡೆಯುವ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ನಳಿನ್, ಸಂಸದ ಡಾ.ಕೆ.ಹರಿಬಾಬು ಪಾಲ್ಗೊಳ್ಳಲಿದ್ದಾರೆ.
ಭಾರತೀಯ ಒಳನಾಡು ಮೀನುಗಾರಿಕೆ ಮತ್ತು ಅಲಂಕಾರಿಕ ಮೀನು ಉತ್ಪಾದನೆಗೆ ಹೊಸ ತಂತ್ರಜ್ಞಾನ, ಮಾರುಕಟ್ಟೆ, ರಫ್ತು ಇತ್ಯಾದಿ ಮಹತ್ವದ ಮಾಹಿತಿಗಳನ್ನು ಮೇಳದಲ್ಲಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದು ಜೀವಂತ ಮೀನುಗಳ ಪೆವಿಲಿಯನ್, ಮೀನು ಅಭಿವೃದ್ಧಿ ತಂತ್ರಜ್ಞಾನ, ಮೀನುಗಾರಿಕಾ ಸಲಕರಣೆಗಳ ತಂತ್ರಜ್ಞಾನದ ಪ್ರದರ್ಶನ ಇದರಲ್ಲಿ ಒಳಗೊಳ್ಳುತ್ತದೆ.
ಸುಮಾರು 3,500ರಷ್ಟು ಪ್ರತಿನಿಧಿಗಳು ವಿವಿಧ ತಾಂತ್ರಿಕಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 14ರಂದು ಮಧ್ಯಾಹ್ನ ನಂತರ ಆಸಕ್ತ ಸ್ಥಳೀಯರಿಗೂ ಅವಕಾಶ ಒದಗಿಸಲಾಗುವುದು, ಸಾರ್ವಜನಿಕರು 100 ರೂ. ಹಾಗೂ ವಿದ್ಯಾರ್ಥಿಗಳು 20 ರೂ. ತೆತ್ತು ಪ್ರವೇಶ ಪಡೆಯಬಹುದು ಎಂದು ಎಂಪೆಡಾ ಕಾರ್ಯದರ್ಶಿ ಶ್ರೀ ಕುಮಾರ್ ತಿಳಿಸಿದರು.
ವಿವಿಧ ಗೋಷ್ಠಿಗಳಲ್ಲಿ ಆಸ್ಟ್ರೇಲಿಯಾ, ಯುಎಸ್‌ಎ, ಸಿಂಗಪುರ, ಥಾಯ್‌ಲ್ಯಾಂಡ್, ಇಂಡೋನೇಷ್ಯ, ಇಸ್ರೇಲ್, ಮಲೇಶ್ಯದ ಅಕ್ವಾಕಲ್ಚರ್ ತಜ್ಞರು ಪಾಲ್ಗೊಳ್ಳಲಿದ್ದಾರೆ.