×
Ad

ಸೇನಾ ಶಾಲೆಯ ಶಿಕ್ಷಕಿಯ ಶವ ಪತ್ತೆ, 25 ಕಡೆ ಚೂರಿ ಇರಿತ

Update: 2017-05-13 19:08 IST
ಕೊಲೆಯಾದ ರೀನಾ ದೇವಿ

ಪಂಚಕುಲಾ(ಪಂಜಾಬ್),ಮೇ 13: ಗುರುವಾರ ರಾತ್ರಿ ತನ್ನ 15ರ ಹರೆಯದ ಪುತ್ರನೊಂದಿಗೆ ಪಿಝ್ಝಾ ತರಲೆಂದು ಇಲ್ಲಿಯ ಸೆಕ್ಟರ್ 20ರಲ್ಲಿರುವ ಮಾರುಕಟ್ಟೆಗೆ ತೆರಳಿದ್ದ ಸಂದರ್ಭ ನಿಗೂಢವಾಗಿ ನಾಪತ್ತೆಯಾಗಿದ್ದ 39ರ ಹರೆಯದ ಶಾಲಾ ಶಿಕ್ಷಕಿಯ ಶವ ಆಕೆಯ ಕಾರಿನಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಆಕೆಯನ್ನು ಬರೋಬ್ಬರಿ 25 ಬಾರಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.

 ಚಂಡಿಮಂದಿರ ಕಂಟೋನ್ಮೆಂಟ್‌ನ ಶೌರ್ಯ ಆರ್ಮಿ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ರೀನಾ ದೇವಿ ರಾತ್ರಿ 9:30ರ ಸುಮಾರಿಗೆ ತನ್ನ ಮಗ ಇನ್ನೂ ಪಿಝ್ಝಾ ಅಂಗಡಿಯಲ್ಲಿರುವಾಗಲೇ ತನ್ನ ಕಾರಿನೊಂದಿಗೆ ನಾಪತ್ತೆಯಾಗಿದ್ದರು. ಮಧ್ಯರಾತ್ರಿಯ ಬಳಿಕ ಚಂಡಿಮಂದಿರ- ರಾಮಗಡ ರಸ್ತೆಯಲ್ಲಿನ ಭಂಡೇರ್ ಘಾಟಿಯಲ್ಲಿ ಕಾರು ಪತ್ತೆಯಾಗಿದ್ದು, ಆಕೆಯನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.

ರೀನಾ ದೇವಿ ತನ್ನಿಬ್ಬರು ಪುತ್ರರೊಂದಿಗೆ ಇಲ್ಲಿ ವಾಸವಿದ್ದರೆ, ನಿವೃತ್ತ ಯೋಧನಾಗಿರುವ ಪತಿ ಸಂದೀಪ ಕುಮಾರ್ ಅವರು ಬಡ್ಡಿಯ ಫ್ಯಾಕ್ಟರಿಯೊಂದರಲ್ಲಿ ಭದ್ರತಾ ಉಸ್ತುವಾರಿಯಾಗಿದ್ದು,ವಾರಾಂತ್ಯಗಳಲ್ಲಿ ಮನೆಗೆ ಬರುತ್ತಿದ್ದರು.

ಕೊಲೆಯ ಹಿಂದಿನ ಕಾರಣವಿನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ತಾಯಿ ಕಾಣದ ಬಳಿಕ ತಾನು ಮನೆಗೆ ವಾಪಸಾಗಿದ್ದೆ ಎಂದು ರೀನಾ ದೇವಿಯ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಎರಡು ಮದ್ಯದ ಬಾಟ್ಲಿಗಳು,ಉರಿದ ಸಿಗರೇಟ್ ತುಂಡುಗಳು ಮತ್ತು ಒಂದು ಹೆಲ್ಮೆಟ್ ಕಾರಿನಲ್ಲಿ ಪತ್ತೆಯಾಗಿವೆ. ಕೊಲೆಗೆ ಮುಂಚೆ ರೀನಾದೇವಿ ಯಾರೊಂದಿಗೋ ಇದ್ದ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸೆಕ್ಟರ್ 20 ಮಾರುಕಟ್ಟೆಯಿಂದ ಪಿಸ್ತೂಲು ತೋರಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳನ್ನು ಅಪಹರಿಸಿ, ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಆಕೆಯ ಶವ ಮಜ್ರಿ ಚೌಕ್ ಬಳಿ ಪತ್ತೆಯಾಗಿತ್ತು.

           ( ರೋದಿಸುತ್ತಿರುವ ಪತಿ ಸುದೀಪ ಕುಮಾರ್ )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News