ಕೇರಳದಲ್ಲಿ ‘ಗೂಂಡಾರಾಜ್’: ಕೇಂದ್ರ ಸಚಿವ ಗಿರಿರಾಜ್ ಕಿಡಿ

Update: 2017-05-13 14:26 GMT

ಕೊಟ್ಟಾಯಂ,ಮೇ 13: ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರಕಾರವು ರಾಜಕೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದು, ರಾಜ್ಯದಲ್ಲಿ ಭಯೋತ್ಪಾದನೆ ಹಾಗೂ ಗೂಂಡಾರಾಜ್ ಅಸ್ತಿತ್ವದಲ್ಲಿದೆಯೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶನಿವಾರ ಆಪಾದಿಸಿದ್ದಾರೆ.

 ಎರಡು ದಿನಗಳ ಹಿಂದೆ ಕುಮಾರಕಂನಲ್ಲಿ ಸಿಪಿಎಂ ಕಾರ್ಯಕರ್ತರ ದಾಳಿಯಲ್ಲಿ ಗಾಯಗೊಂಡಿದ್ದರೆನ್ನಲಾದ ಬಿಜೆಪಿ ಕಾರ್ಯಕರ್ತರನ್ನು ಅವರು ಚಿಕಿತ್ಸೆ ಪಡೆಯುತ್ತಿರುವ ಕೊಟ್ಟಾಯಂನ ಆಸ್ಪತ್ರೆಯೊಂದರಲ್ಲ್ಲಿ ಭೇಟಿಯಾದ ಬಳಿಕ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

 ಕೇರಳದಲ್ಲಿ ವಾಕ್‌ಸ್ವಾತಂತ್ರವಿಲ್ಲ. ಇಲ್ಲಿ ಕೇವಲ ಭಯೋತ್ಪಾದನೆ ಹಾಗೂ ಗೂಂಡಾರಾಜ್ ಮಾತ್ರವೇ ಆಸ್ತಿತ್ವದಲ್ಲಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ರಾಜ್ಯಮಟ್ಟದ ಸಮಸ್ಯೆಯಲ್ಲ, ಅದು ಇಡೀ ದೇಶವೇ ಆತಂಕಪಡುವ ವಿಷಯವೆಂದು, ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವರಾದ ಗಿರಿರಾಜ್ ಕಿಶೋರ್ ಹೇಳಿದರು.

ಸಿಪಿಎಂನ ಬೆಂಬಲಿಗರೆನ್ನಲಾದ 28 ಮಂದಿಯ ಗುಂಪೊಂದು ಕುಮಾರಕಂನಲ್ಲಿ ಬಿಜೆಪಿ ಇಬ್ಬರು ಗ್ರಾಮಪಂಚಾಯತ್ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರತಿಭಟಿಸಿ, ಬಿಜೆಪಿಯು ಶುಕ್ರವಾರ ಕೊಟ್ಟಾಯಂ ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಹರತಾಳಕ್ಕೆ ಕರೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News