×
Ad

​ಕಸ್ತೂರಿರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಯಡಿಯೂರಪ್ಪ

Update: 2017-05-13 22:09 IST

ಬೈಂದೂರು, ಮೇ 13: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಸ್ತೂರಿರಂಗನ್ ವರದಿಯನ್ನು ಜಾರಿಯಾಗಲು ಬಿಡುವುದಿಲ್ಲ. ಆ ಬಗ್ಗೆ ಈಗಾಗಲೇ ನಮ್ಮ ಸಂಸತ್ ಸದಸ್ಯರೆಲ್ಲರೂ ಸೇರಿ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ವರದಿ ಜಾರಿಗೊಳಿಸದಂತೆ ಒತ್ತಾಯಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿವಮೊಗ್ಗ ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬೈಂದೂರಿನ ರಾಜರಾಜೇಶ್ವರಿ ಕಲಾಮಂದಿರದಲ್ಲಿ ನಡೆದ ಉಡುಪಿ ಜಿಲ್ಲಾ ಬಿಜೆಪಿಯ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ನಾನು, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ನಿರ್ಮಲಾ ಸೀತಾರಾಮ್ ಸೇರಿದಂತೆ 7-8 ಮಂದಿ ಸೇರಿ ಸಚಿವರನ್ನು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ್ದೇವೆ. ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದ ಈ ಸಮಸ್ಯೆ ಉದ್ಭವವಾಗಿದೆ. ಆದುದರಿಂದ ಈ ಕಸ್ತೂರಿರಂಗನ್ ವರದಿಯನ್ನು ಕೇಂದ್ರದಿಂದ ಜಾರಿಗೆ ಬರದಂತೆ ತಡೆಯುವ ಎಲ್ಲಾ ಪ್ರಯತ್ನ ಮಾಡುತಿದ್ದೇವೆ. ಆದುದರಿಂದ ಈ ಭಾಗದ ಜನತೆ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದವರು ಸ್ಪಷ್ಟಪಡಿಸಿದರು.

ಈ ತಿಂಗಳ 18ರಿಂದ ಮುಂದಿನ ತಿಂಗಳ 26ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಲ್ಲಿನ ಬರ ಪರಿಸ್ಥಿತಿ, ಜಲ್ವಂತ ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಶಿಷ್ಟ ಜಾತಿ, ವರ್ಗಗಳ ಕಾಲನಿಗಳಿಗೆ ಭೇಟಿ, ಸಂಜೆ ಸಾರ್ವಜನಿಕ ಸಭೆ ನಡೆಸಲಿದ್ದೇವೆ. ಈ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 35-40 ದಿನಗಳ ಕಾಲ ಪ್ರವಾಸ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಲು ನಿರ್ಧರಿಸಿದ್ದೇವೆ. ಈ ದಿಶೆಯಲ್ಲಿ ಮುಂದಿನ ತಿಂಗಳ 8ರಂದು ಉಡುಪಿಗೆ ಹಾಗೂ 9ರಂದು ಮಂಗಳೂರಿಗೆ ಮತ್ತೊಮ್ಮೆ ಆಗಮಿಸಲಿದ್ದೇನೆ ಎಂದು ಯಡಿಯೂರಪ್ಪ ನುಡಿದರು.

ಸಾಲ ಮನ್ನಾಕ್ಕಾಗಿ ಹೋರಾಟ: ರಾಜ್ಯದಲ್ಲಿ ಭೀಕರ ಬರಪರಿಸ್ಥಿತಿ ಇದ್ದು, ರಾಜ್ಯದ ರೈತ ಸಂಘ, ವಿವಿಧ ರೈತ ಸಂಘಟನೆಗಳಿಂದ ರೈತರ ಸಾಲ ಮನ್ನಾಕ್ಕೆ ಒಕ್ಕೊರಳ ಬೇಡಿಕೆ ಇದ್ದರೂ ಸಹ ಈ ಸರಕಾರ ಮೀನಾಮೇಷ ಮಾಡುತ್ತಿದೆ. ತಕ್ಷಣ ರೈತರ ಸಾಲ ಮನ್ನಾ ಮಾಡದಿದ್ದರೆ, ಮುಂದೆ ನಿರ್ಧರಿಸುವ ದಿನಾಂಕದಂದು ರಾಜ್ಯದ ಉದ್ದಗಲಕ್ಕೂ ತೀವ್ರವಾದ ಹೋರಾಟವನ್ನು ಪಕ್ಷದಿಂದ ಹಮ್ಮಿಕೊಳ್ಳಲಿದ್ದೇವೆ ಎಂದರು.

ಪಕ್ಷದ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಜೂ.15ರಿಂದ ಪ್ರತಿಯೊಬ್ಬ ಕಾರ್ಯಕರ್ತ 15 ದಿನವನ್ನು ಪಕ್ಷಕ್ಕಾಗಿ ಸಮಯ ನೀಡಿ, ಇನ್ನೊಂದು ಕ್ಷೇತ್ರಕ್ಕೆ ತೆರಳಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲ ಪಡಿಸಲು ದುಡಿಯಬೇಕೆಂಬುದು ನಮ್ಮ ಅಪೇಕ್ಷೆಯಾಗಿದ್ದು, ಇಂದಿನ ಕಾರ್ಯಕಾರಣಿ ಯಲ್ಲಿ ಈ ಬಗ್ಗೆ ಚರ್ಚಿಸಿ ಸುಮಾರು 15ರಿಂದ 20ಸಾವಿರ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ಅಣಿಗೊಳಿಸಲಾಗುವುದು ಎಂದರು.

ಪಕ್ಷಕ್ಕೆ ಸೇರ್ಪಡೆ: ನಮ್ಮ ಮತ್ತು ಈಶ್ವರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಾಗಲಿ, ಗೊಂದಲಗಳಾಗಲಿ ಇಲ್ಲ. ನಾವೆಲ್ಲ ಒಂದಾಗಿದ್ದೇವೆ. ಒಟ್ಟಾಗಿ ಪಕ್ಷದ ಬಲವರ್ಧನೆಗೆ ದುಡಿಯುತ್ತೇವೆ. ಮೊನ್ನಿನ ರಾಜ್ಯ ಕಾರ್ಯಕಾರಿಣಿಯೂ ಸುಸೂತ್ರವಾಗಿ ನಡೆದಿದ್ದು, ಪಕ್ಷದಲ್ಲಿ ಯಾವುದೇ ಗೊಂದಲ, ಸಮಸ್ಯೆ ಇಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಬಾರಿ ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅನ್ಯ ಪಕ್ಷದಿಂದ ಬಿಜೆಪಿಗೆ ಬರಲಿಚ್ಚಿಸುವ ಹಿಂದುಳಿದ ಮತ್ತು ದಲಿತ ನಾಯಕರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದೇನೆ. ಈ ನನ್ನ 35 ದಿನಗಳ ಪ್ರವಾಸದಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ಮಾಡುತ್ತೇನೆ. ಈಗಾಗಲೇ ಅನೇಕ ಮಂದಿ ನಮ್ಮ ಪಕ್ಷಕ್ಕೆ ಸೇರ್ಪಡೆ ಗೊಳ್ಳಲು ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಇಂಥ ಸೇರ್ಪಡೆ ನನ್ನ ರಾಜ್ಯ ಪ್ರವಾಸ ಸಂದರ್ಭದಲ್ಲಿ ನಡೆಯಲಿದೆ ಎಂದರು.
ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅವರ ಪಕ್ಷ ಸೇರ್ಪಡೆ ಕುರಿತು ಪ್ರಶ್ನಿಸಿದಾಗ, ನಾನು ಅವರನ್ನು ಭೇಟಿ ಮಾಡಿಲ್ಲ. ಅವರೊಂದಿಗೆ ನಾನು ಸಂಪರ್ಕದಲ್ಲಿ ಇಲ್ಲ. ಅವರು ಪಕ್ಷಕ್ಕೆ ಸೇರುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News