ಉಡುಪಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ: ಸಚಿವ ಪ್ರಮೋದ್
ಉಡುಪಿ, ಮೇ 13: ಪದವಿ ವಿದ್ಯಾರ್ಥಿಗಳ ಕೌಶಲ್ಯಮಟ್ಟವನ್ನು ಪರಿಶೀಲಿಸಿ ಅವರಿಗೆ ನೇರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯಿಂದ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅದೇ ಮಾದರಿಯ ಕೇಂದ್ರ ವನ್ನು ಉಡುಪಿಯಲ್ಲೂ ಶೀಘ್ರವೇ ಸ್ಥಾಪಿಸಲಾಗುವುದು ಎಂದು ರಾಜ್ಯ ಮೀನು ಗಾರಿಕೆ ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜು, ಮಣಿಪಾಲ ವಿಶ್ವವಿದ್ಯಾಲಯ ಹಾಗೂ ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಉದ್ಯೋಗ ಮಾರ್ಗದರ್ಶನ ಹಾಗೂ ಸಿಇಟಿ ನೇಮಕಾತಿ ಪ್ರಕ್ರಿಯೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಎಲ್ಲರೂ ಎಂಜಿನಿಯರ್, ವೈದ್ಯರಾಗಬೇಕೆಂಬುದು ಬಯಸುವುದು ಸರಿ ಯಲ್ಲ. ಇದರಿಂದ ಎಂಜಿನಿಯರಿಂಗ್ ಪದವೀಧರರು ಏಳೆಂಟು ಸಾವಿರಕ್ಕೆ ದುಡಿಯುವ ಪರಿಸ್ಥಿತಿ ಎದುರಾಗಿದೆ. ಆದುದರಿಂದ ನಮ್ಮ ಜಿಲ್ಲೆಯ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಉದ್ಯೋಗದ ಕುರಿತು ಮಾರ್ಗದರ್ಶನ ಹಾಗೂ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಪೋಷಕರು ಮಕ್ಕಳ ಆಸಕ್ತಿಗೆ ಆದ್ಯತೆ ನೀಡಬೇಕು. ಅವರು ಏನಾಗಬೇಕೆಂದು ಪೋಷಕರು ತೀರ್ಮಾನ ಮಾಡುವುದು ಸರಿಯಲ್ಲ. ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಮುಂದುವರೆದು ಸಾಧನೆ ಮಾಡುವಂತೆ ಮಾಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದರು.
ಉಡುಪಿ ಕಾರ್ಪೊರೇಶನ್ ಬ್ಯಾಂಕಿನ ಮಹಾಪ್ರಬಂಧಕ ರಾಜೇಂದ್ರ ಪ್ರಸಾದ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉಡುಪಿ ನೋಡಲ್ ಅಧಿಕಾರಿ ಸಚಿತ್ ಸುವರ್ಣ, ಲೆಕ್ಕಪರಿಶೋಧಕ ಅನಂತನಾರಾಯಣ ಪೈ, ಮಣಿಪಾಲ ವಿವಿಯ ಡಾ.ಭವಾನಿ ರಾವ್, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲೆ ಮಾಲತಿದೇವಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ನಾಗರಾಜ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕ ಸುಚೀತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.