ಎಸ್‌ಸಿಡಿಸಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ
Update: 2017-05-13 22:22 IST
ಮಂಗಳೂರು, ಮೇ 13: ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ನೌಕರ ವಿರೋಧಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಬಿಇಎಫ್‌ಐಗೆ ಸಂಯೋಜಿತಗೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಸಂಘಟನೆಯು ಮೇ 16ರಂದು ಬೆಳಗ್ಗೆ 10 ಗಂಟೆಗೆ ನಗರದ ಎಸ್‌ಸಿಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿಯೆದುರು ಪ್ರತಿಭಟನೆ ನಡೆಸಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಸಂಘಟನೆ ಪ್ರಕಟನೆಯಲ್ಲಿ ತಿಳಿಸಿದೆ.
ದುಡಿಯುತ್ತಿರುವ ನೌಕರರ ವಿನಾ ಕಾರಣ ವರ್ಗಾವಣೆ, ನೌಕರರ ಸಂಘಟನೆಯಲ್ಲಿ ಬಿರುಕು ಮೂಡಿಸಲು ನಡೆಸಿರುವ ಹತಾಶೆ ಪ್ರಯತ್ನ ಸಹಿತ ಹಲವಾರು ನೌಕರ ವಿರೋಧಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಮೇ 16ರಂದು ನಡೆಯುವ ಪ್ರತಿಭಟನೆಯ ಉದ್ಘಾಟನೆಯನ್ನು ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಮುಖಂಡ ಬಿ.ಎಂ.ಮಾಧವ ನೆರವೇರಿಸಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಜಯರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೊನ್ ಪ್ರಕಾಶ್ ಡಿಸೋಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.