ಕರ್ಣಾಟಕ ಬ್ಯಾಂಕ್: ವಾರ್ಷಿಕ ರೂ.452.26 ನಿವ್ವಳ ಲಾಭ
ಮಂಗಳೂರು, ಮೇ 13: ಖಾಸಗಿ ರಂಗದ ಪ್ರಮುಖ ಬ್ಯಾಂಕ್, ಕರ್ಣಾಟಕ ಬ್ಯಾಂಕ್‌ನ ವಾರ್ಷಿಕ ನಿವ್ವಳ ಲಾಭವು ಹೆಚ್ಚಳಗೊಂಡು ರೂ.452.26 ಕೋಟಿಗೆ ತಲುಪಿದೆ. ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಹಿಂದಿನ ಲಾಭವು ರೂ. 451.29 ಕೋಟಿಯಾಗಿದ್ದು, 2014-15 ವರ್ಷಾಂತ್ಯಕ್ಕೆ ದಾಖಲಾಗಿತ್ತು ಎಂದು ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.
ನಾಲ್ಕನೆ ತ್ರೈಮಾಸಿಕದ ನಿವ್ವಳ ಲಾಭಾಂಶದಲ್ಲೂ ಏರಿಕೆಯಾ ಗಿದ್ದು, ರೂ. 138.37 ಕೋ.ರೂ. ಶೇ.29.57 ವೃದ್ಧಿಯಾಗಿದೆ. ಇಂದು ಸಂಪನ್ನಗೊಂಡ ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಬ್ಯಾಂಕ್‌ನ ಹಣಕಾಸು ವರದಿ (ಆರ್ಥಿಕ ಫಲಿತಾಂಶ) ಅಂಗೀಕಾರಗೊಂಡಿದೆ. ಬ್ಯಾಂಕ್‌ನ ವಿಸ್ತೃತ ಬಂಡವಾಳದ ಮೇಲೆ 40 ಶೇ. ಡಿವಿಡೆಂಡ್ ಘೋಷಿಸಲು ಅನುಮೋದಿಸಲಾಯಿತು. ಕಳೆದ ವರ್ಷಾಂತ್ಯಕ್ಕೆ ರೂ. 50,488 ಕೋಟಿಗಳಷ್ಟಿದ್ದ ಬ್ಯಾಂಕ್‌ನ ಠೇವಣಿಯು ಶೇ. 12.37 ಏರಿಕೆಗೊಂಡು ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ 56,733 ಕೋ. ರೂ. ತಲುಪಿದೆ. ಅಂತೆಯೇ ಬ್ಯಾಂಕ್‌ನ ಮುಂಗಡವು ಕಳೆದ ವರ್ಷದ ರೂ. 33,902 ಕೋಟಿಯಿಂದ ರೂ. 37,004 ಕೋಟಿಗೆ ವೃದ್ಧಿಸಿ ಶೇ 9.15 ಅಭಿವೃದ್ಧಿಯನ್ನು ಕಂಡಿದೆ. ಬ್ಯಾಂಕ್‌ನ ಉಳಿತಾಯ ಹಾಗೂ ಚಾಲ್ತಿ ಖಾತೆಯ ಠೇವಣಿ ಶೇ.24.23 ಅಭಿವೃದ್ಧಿ ದರದಲ್ಲಿ ವೃದ್ಧಿಯಾಗಿದ್ದು, 31 ಮಾರ್ಚ್ 2017ರ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ಠೇವಣಿಗಳ ಶೇ. 29.04 ರಷ್ಟಿದೆ. ಈ ಅನುಪಾತ ಕಳೆದ ವರ್ಷಾಂತ್ಯಕ್ಕೆ ಶೇ. 26.26ರಷ್ಟಿತ್ತು. 1560.23 ಕೋ.ರೂ.ಗಳಷ್ಟಿದ್ದ ಸ್ಥೂಲ ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) 1581.59 ಕೋ.ರೂ.ಗೆ ತಲುಪಿದೆ. ಶೇಕಡವಾರು ಜಿಎನ್‌ಪಿಎ ಇಳಿಕೆ ಕಂಡಿದೆ. ನಿವ್ವಳ ಅನುತ್ಪಾದಕ ಆಸ್ತಿಗಳಲ್ಲಿ (ನೆಟ್ ಎನ್‌ಪಿಎ) ಇಳಿಮುಖವಾಗಿ ರೂ. 974.73 ಕೋಟಿಗಳಷ್ಟಿದೆ.
ಬ್ಯಾಂಕ್‌ನ ನಿರ್ವಹಣಾ ಲಾಭಾಂಶ ಹೆಚ್ಚಳ ಗೊಂಡಿದ್ದು, 995.80 ಕೋ.ರೂ.ಗೆ ತಲುಪಿದೆ. ಹಿಂದಿನ ವರ್ಷ ಇದು ರೂ. 854.53 ಕೋಟಿಯಷ್ಟಿತ್ತು. ಆದ್ಯತಾ ರಂಗಕ್ಕೆ ನೀಡಿದ ಮುಂಗಡವು ಬ್ಯಾಂಕ್‌ನ ಒಟ್ಟು ಮುಂಗಡದ ಶೇ. 48.13 ರಷ್ಟಿದೆ. ಇದು ಆರ್‌ಬಿಐನ ನಿರ್ದೇಶಿತ ಗುರಿ ಕನಿಷ್ಠ ಶೇ.40ಕ್ಕಿ0ತ ಅಧಿಕವಾಗಿಯೇ ಇದೆ. ಹಾಗೆಯೇ ಕೃಷಿ ರಂಗಕ್ಕೆ ನೀಡಿದ ಮುಂಗಡವು ಕೂಡಾ ಶೇ. 18.38 ಆಗಿದ್ದು ಇದು ನಿಗದಿತ ದರ ಶೇ. 18ಕ್ಕಿಂತ ಹೆಚ್ಚಿದೆ ಎಂದವರು ವಿವರಿಸಿದರು.
ಬ್ಯಾಂಕ್‌ನ ಮುನ್ನೋಟದ ಬಗ್ಗೆ ಮಾತನಾಡಿದ ಮಹಾಬಲೇಶ್ವರ ಎಂ.ಎಸ್., 2017-18ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ಮುಂಗಡವನ್ನು ಇನ್ನೂ ಹೆಚ್ಚು ಅಭಿವುದ್ಧಿಗೊಳಿಸುವುದು, ಗುಣಾತ್ಮಕವಾದ ಸೊತ್ತುಗಳ ವರ್ಧನೆ ಮತ್ತು ಸರ್ವಾಂಗೀಣ ಸಾಮರ್ಥ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಬ್ಯಾಂಕ್ ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಲಿದೆ. ಮುಂಬರುವ ವರ್ಷಗಳಲ್ಲಿ ಕರ್ಣಾಟಕ ಬ್ಯಾಂಕ್ ದೇಶದ ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.