ದ.ಕ. ಜಿಲ್ಲಾ ಯುವ ಸಮ್ಮೇಳನ-ಯುವ ಪ್ರಶಸ್ತಿ ಪ್ರದಾನ ಸಮಾರಂಭ

Update: 2017-05-13 18:20 GMT

ಮಂಗಳೂರು, ಮೇ 13: ದ.ಕ. ಜಿಲ್ಲಾ ಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ ಹಾಗೂ ಜಿಲ್ಲಾಮಟ್ಟದ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಗರದ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ದ.ಕ. ಜಿಲ್ಲಾಡಳಿತ, ಜಿಪಂ, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೇಲಂತಬೆಟ್ಟು ಯುವಕ ಮಂಡಲ, ಟೀಮ್ ಇನ್ಸ್ ಸ್ಪಿರೇಶನ್‌ನ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಒಟ್ಟು ಜನಸಂಖ್ಯೆಯ ಶೇ.65ರಷ್ಟು ಯುವಕರಿದ್ದಾರೆ. ಈ ಪೈಕಿ ಶೇ.40ರಷ್ಟು ಮಂದಿ 21ರಿಂದ 40 ವರ್ಷದ ಒಳಗಿನವರು. ಯುವಕರ ಚಿಂತನೆ, ಶಕ್ತಿ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ನಾವು ಅವರಿಗೆ ತಿಳಿಸಿಕೊಡಬೇಕು. ನಮ್ಮದೇ ಆದ ಶಿಸ್ತು, ಗಾಂಭೀರ್ಯದ ಮೂಲಕ ಇಡೀ ಪ್ರಪಂಚದಲ್ಲೇ ನಂಬರ್ ವನ್ ಸ್ಥಾನಕ್ಕೇರಲು ಸಂಕಲ್ಪ ತೊಡಬೇಕೆಂದು ಅವರು ಯುವ ಸಮುದಾಯಕ್ಕೆ ಕರೆ ನೀಡಿದರು. ವಿವಿಧ ಯುವಕ ಹಾಗೂ ಯುವತಿ ಮಂಡಲಗಳಲ್ಲಿನ ಸಾಧನೆಗಾಗಿ ಪುತ್ತೂರಿನ ಗುರುಪ್ರಿಯ ನಾಯಕ್, ಕರಂಬಾರಿನ ಸುಬ್ರಹ್ಮಣ್ಯ, ಚಂದ್ರಹಾಸ ಬಳಂಜ, ಅಕ್ಷತಾ ತಣ್ಣೀರುಬಾವಿ ಹಾಗೂ ಪ್ರವೀಣ್ ಕುಮಾರ್ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೇಯರ್ ಕವಿತಾ ಸನಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಅದ್ವಂತ ಆಲಿಯೆಂಟ್‌ನ ಸಹ ಮಾಲಕ ಸಂತೋಷ್ ಕೊಟ್ಟಾರಿ, ನ್ಯಾಯವಾದಿ ನಿತಿನ್ ವರ್ಮ ಪಡಿವಾಳ್, ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ತಾರನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ಸೂಡಿಮುಳ್ಳು, ಟೀಂ ಇನ್‌ಸ್ಪಿರೇಷನ್ ಅಧ್ಯಕ್ಷ ಜಗದೀಶ್, ಗಿರೀಶ್ ಶೆಟ್ಟಿ, ದೇಲಂತಬೆಟ್ಟು ಯುವಕ ಮಂಡಲ ಅಧ್ಯಕ್ಷ ಬಾಲಕೃಷ್ಣ ಮತ್ತಿತತರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News