ಕೋಮು ಮೂಲಭೂತವಾದಕ್ಕೆ ಪ್ರಗತಿಶೀಲ ಶಕ್ತಿಗಳೇ ಉತ್ತರ: ಮುಹಮ್ಮದ್ ರಿಯಾಝ್

Update: 2017-05-14 09:00 GMT

ಮಂಗಳೂರು, ಮೇ 14: ಯಾವುದೇ ಒಂದು ಧರ್ಮದ ಕೋಮು ಮೂಲಭೂತವಾದವನ್ನು ಇನ್ನೊಂದು ಧರ್ಮದ ಕೋಮು ಸಂಘಟನೆಯಿಂದ ಹಿಮ್ಮೆಟ್ಟಿಸಲು ಸಾಧ್ಯವೇ ಇಲ್ಲ. ಕೋಮು ಮೂಲಭೂತವಾದಕ್ಕೆ ಪ್ರತಿಯಾಗಿ ಪ್ರಜಾಪ್ರಭುತ್ವವಾದಿ ಪ್ರಗತಿಶೀಲ ಶಕ್ತಿಗಳನ್ನು ಬಲಪಡಿಸುವುದೇ ಇಂದಿನ ತುರ್ತು ಅಗತ್ಯ ಎಂದು ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ ಮುಹಮ್ಮದ್ ರಿಯಾಝ್ ಕ್ಯಾಲಿಕಟ್ ಅಭಿಪ್ರಾಯಿಸಿದ್ದಾರೆ.

ನಗರದ ಬಲ್ಮಠದ ಶಾಂತಿ ನಿಲಯದಲ್ಲಿ ಡಿವೈಎಫ್‌ಐ ವತಿಯಿಂದ ಆಯೋಜಿಸಲಾಗಿರುವ "ಮುಸ್ಲಿಂ ಯುವ ಸಮಾವೇಶ"ದಲ್ಲಿ ಅವರು ಉದ್ಘಾಟನಾ ನುಡಿಗಳನ್ನಾಡಿದರು.

ದೇಶದಲ್ಲಿ ಆರೆಸ್ಸೆಸ್ ಬೆಂಬಲಿತ ಮತೀಯವಾದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಸಮುದಾಯದ ಯುವಜನಾಗ ಕೋಮುವಾದಿ ಸಂಘಟನೆಗಳತ್ತ ಆಕರ್ಷಿತರಾಗುತ್ತಿರುವುದು ಆತಂಕದ ಸಂಗತಿ. ಆದರೆ ಒಂದು ಧರ್ಮದ ಮೂಲಭೂತವಾದಕ್ಕೆ ಮತ್ತೊಂದು ಧರ್ಮದ ಮೂಲಭೂತವಾದಿಂದ ಉತ್ತರ ನೀಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಮುಸ್ಲಿಂ ಮೂಲಭೂತವಾದವು ನವ ಉದಾರೀಕರಣ ಮತ್ತು ಮತೀಯವಾದವನ್ನೊಳಗೊಂಡ ಇಬ್ಬಗೆ ನೀತಿಯನ್ನು ಜಾರಿಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದರು

ನವ- ಉದಾರೀಕರಣದ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಲು ಕರೆ
ಮುಸ್ಲಿಂ ಯುವಕರು ನವ ಉದಾರೀಕರಣದ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದ ಅವರು, ಒಂದು ವೇಳೆ ಯುವಕರು ತಪ್ಪು ಹಾದಿ ಹಿಡಿದು ಮೂಲಭೂತ ಗುಂಪುಗಳಿಗೆ ಸೇರ್ಪಡೆಗೊಂಡಲ್ಲಿ ಅದು ಸಂಘ ಪರಿವಾರದ ಮತೀಯವಾದದ ಅಜೆಂಡಾವನ್ನು ಪೂರೈಸುವಲ್ಲಿ ಸಹಕರಿಸಿದಂತೆ. ಇತರ ಎಲ್ಲಾ ಧರ್ಮಗಳಂತೆ ಇಸ್ಲಾಂ ಧರ್ಮ ಕೂಡಾ ಸಹಿಷ್ಣುತೆ ಮತ್ತು ಮಾನವೀಯತೆಯನ್ನು ಬೋಧಿಸುತ್ತದೆ. ಹಾಗಾಗಿ ಇಸ್ಲಾಂನ ಹೆಸರಿನಲ್ಲಿ ಮತೀಯವಾದದ ಚಟುವಟಿಕೆಗಳನ್ನು ನಡೆಸುವುದು ನಮ್ಮ ದೇಶದ ಹಿತಾಸಕ್ತಿಗೆ ಮಾತ್ರವಲ್ಲ, ಇಸ್ಲಾಂ ಧರ್ಮದ ಮೌಲ್ಯಕ್ಕೆ ವಿರುದ್ಧ ಎಂದವರು ಹೇಳಿದರು.

ಮುಸ್ಲಿಮರು, ದಲಿತರು ಮತ್ತು ಇತರ ತುಳಿತಕ್ಕೊಳಗಾದ ಸಮುದಾಯಗಳು ಮತ್ತು ಭಾರತದಲ್ಲಿ ನೆಲೆಸಿರುವ ಇತರ ದೇಶಗಳ ದಮನಿತರು ಕೂಡಾ ಇಂದು ಮತೀಯ ಶಕ್ತಿಗಳ ದಾಳಿಗಳಿಂದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ದಮನಿತರ ಸಮುದಾಯಗಳ ವಿರುದ್ಧ ಧ್ವನಿ ಎತ್ತುವವರು ಸಂಘ ಪರಿವಾರ ಮತ್ತು ಬಿಜೆಪಿ ಸರಕಾರಕ್ಕೆ ಸಹ್ಯವಾಗುತ್ತಿಲ್ಲ. ಮಾನವೀಯತೆಯ ಪರ ಧ್ವನಿ ಎತ್ತುವವರಿಗೆ ‘ದೇಶ ವಿರೋಧಿ’ಗಳೆಂಬ ಹಣೆಪಟ್ಟಿ ನೀಡಿ ಪಾಕಿಸ್ತಾನಕ್ಕೆ ತೆರಳುವಂತೆ ಹೇಳಲಾಗುತ್ತದೆ. ಗೋಹತ್ಯೆಯ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರ ಭಾವನೆಗಳಿಗೆ ಆರೆಸ್ಸೆಸ್ ಕೊಳ್ಳಿ ಇಡುವಂತಹ ಕಾರ್ಯವನ್ನು ಮಾಡುತ್ತಿದೆ. ಗೋವುಗಳ ರಕ್ಷಣೆ ನೆಪದಲ್ಲಿ ಮುಗ್ಧ ಜನರನ್ನು ಕೊಲ್ಲಲಾಗುತ್ತಿದೆ. ಅಮಾನವೀಯ ಹಿಂಸೆಗಳ ವಿರುದ್ಧ ಧ್ವನಿ ಎತ್ತುವ ರಾಜಕೀಯ ನಾಯಕರನ್ನೂ ದಮನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News