×
Ad

ಒಳನಾಡು ಮೀನುಗಾರಿಕೆ ಅಭಿವೃದ್ಧಿ: ಕೇಂದ್ರ ಸರಕಾರಕ್ಕೆ ಸಚಿವ ಪ್ರಮೋದ್ ಆಗ್ರಹ

Update: 2017-05-14 16:13 IST

ಮಂಗಳೂರು, ಮೇ 14: ದೇಶದ ಕರಾವಳಿ ರಾಜ್ಯಗಳಲ್ಲಿ ಒಳನಾಡು ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನೊಂದನ್ನು ರೂಪಿಸುವಂತೆ ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಸಾಗರ ಉತ್ಪನ್ನಗಳ ಆಮದು ಅಭಿವೃದ್ಧಿ ಪ್ರಾಧಿಕಾರ(ಎಂಪೆಡಾ)ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಮೂರು ದಿನಗಳ ‘ಅಕ್ವಾ ಅಕ್ವೇರಿಯಾ ಇಂಡಿಯಾ-2017’ ಪ್ರದರ್ಶನಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ರಾಜ್ಯ ಸರಕಾರ ನೆರವು ನೀಡಲಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲೂ ಸಿಹಿ ನೀರು ಮೀನುಗಾರಿಕೆಗೆ ಆದ್ಯತೆಯನ್ನು ನೀಡುವ ಅಗತ್ಯವಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರಿನಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶ ಇದೆ. ಜಗತ್ತಿನಲ್ಲಿ 167 ಮಿಲಿಯನ್ ಟನ್ ಮೀನು ಉತ್ಪಾದನೆಯಾಗುತ್ತಿದೆ. 93 ಮಿಲಿಯನ್ ಟನ್ ಸಮುದ್ರ ಮೀನು ಹಾಗೂ 73.28 ಮಿಲಿಯನ್ ಟನ್ ಸಿಹಿ ನೀರು ಉತ್ಪಾದನೆಯಾಗುತ್ತಿದೆ. ಮೀನಿನಲ್ಲಿ ಪೌಷ್ಠಿಕಾಂಶ ಇರುವುದರಿಂದ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಿಂದ ಮೀನು ಉತ್ಪಾದನೆ ಹೆಚ್ಚಳಕ್ಕೆ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.

ವಿಶಾಖಪಟ್ಟಣ ಸಂಸದ, ಎಂಪೆಡಾ ನಿರ್ದೇಶಕ ಡಾ.ಹರಿಬಾಬು ಮಾತನಾಡಿ, ಒಳನಾಡು ಮೀನುಗಾರಿಕೆಗೆ ಪಶ್ಚಿಮ ಕರಾವಳಿಯಲ್ಲಿ ಸಾಕಷ್ಟು ಅವಕಾಶ ಇದೆ. ಆಂಧ್ರಪ್ರದೇಶ ಒಳನಾಡು ಮೀನುಗಾರಿಕೆಯ ಹಬ್ ಆಗಿದ್ದು, ಅಲ್ಲಿ ಮೀನುಗಾರಿಕೆಗಿಂತ ಮೀನು ಸಾಕಣೆ ಹವ್ಯಾಸವಾಗಿದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಸ್ಮಾರ್ಟ್ ಸಿಟಿ ಘೋಷಣೆಯ ಹಿನ್ನೆಲೆಯಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣಬೇಕಾಗಿದೆ ಎಂದರು. 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕ ಹರಿಕೃಷ್ಣ, ಎಂಪೆಡಾ ಅಧ್ಯಕ್ಷ ಜಯತಿಲಕ್, ಕಾರ್ಯದರ್ಶಿ ಶ್ರೀಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News