×
Ad

ಕಪಿಲ್ ಹಿಂದೆ ಅಡಗಬೇಡಿ; ಮುಖಾಮುಖಿ ಹೋರಾಟಕ್ಕೆ ಬನ್ನಿ - ಬಿಜೆಪಿಗೆ ಆಪ್ ಸವಾಲು

Update: 2017-05-14 19:23 IST

ಹೊಸದಿಲ್ಲಿ, ಮೇ 14: ಉಚ್ಚಾಟಿತ ಸದಸ್ಯ ಕಪಿಲ್ ಮಿಶ್ರ ಜೊತೆ ಸೇರಿಕೊಂಡು ಪಕ್ಷವನ್ನು ಮುಗಿಸಲು ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ಅವರ ಹೆಸರನ್ನು ಕೆಡಿಸಲು ಬಿಜೆಪಿ ಒಳಸಂಚು ಹೂಡಿದೆ ಎಂದು ‘ಆಮ್ ಆದ್ಮಿ ಪಕ್ಷ (ಆಪ್)’ ಆರೋಪಿಸಿದೆ. ಬಿಜೆಪಿಯವರೇ, ಕಪಿಲ್ ಮಿಶ್ರ ಹಿಂದೆ ಅಡಗಿಕೊಂಡು ಕೇಜ್ರೀವಾಲ್ ಹೆಸರು ಕೆಡಿಸುವ ಯತ್ನ ಕೈಬಿಡಿ. ಆಪ್ ಜೊತೆ ಹೋರಾಡಲು ಬಯಸುವಿರಾದರೆ ಮುಂದೆ ಬನ್ನಿ, ಮುಖಾಮುಖಿ ಹೋರಾಟ ನಡೆಯಲಿ. ಯಾವುದೇ ಸಾಕ್ಷವಿಲ್ಲದೆ ಪೇಪರ್ ಚೂರುಗಳನ್ನು ಅಲ್ಲಾಡಿಸುವುದರಲ್ಲಿ ಅರ್ಥವಿಲ್ಲ ಎಂದು ‘ಆಪ್’ ಮುಖಂಡ ಸಂಜಯ ಸಿಂಗ್ ಹೇಳಿದರು.

  ಕಳೆದ ಎರಡೂವರೆ ವರ್ಷಗಳಿಂದಲೂ ಬಿಜೆಪಿಯವರು ಡೊನೇಷನ್ ಮತ್ತು 2 ಕೋಟಿ ರೂ. ಬಗ್ಗೆ ಮಾತನಾಡುತ್ತಿದ್ದರು. ಇದೀಗ ಇದೇ ಮಾತನ್ನು ಕಪಿಲ್ ಶರ್ಮ ಹೇಳುತ್ತಿದ್ದಾರೆ. ಅಷ್ಟೊಂದು ಸಶಕ್ತವಾಗಿರುವ ಕೇಂದ್ರ ಸರಕಾರಕ್ಕೂ ಈ 2 ಕೋಟಿ ರೂ. ಡೊನೇಷನ್ ಆರೋಪವನ್ನು ರುಜುವಾತು ಪಡಿಸಲು ಆಗಲಿಲ್ಲ. ಬಿಜೆಪಿಗೆ ತನ್ನ ಕಾಲ ಮೇಲೆ ನಿಲ್ಲುವ ಶಕ್ತಿಯೇ ಇಲ್ಲ ಎಂದು ಸಿಂಗ್ ಟೀಕಿಸಿದರು.
    
 ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಉಚ್ಛಾಟಿತ ಆಪ್ ಮುಖಂಡ ಕಪಿಲ್ ಮಿಶ್ರ, ಕೇಜ್ರೀವಾಲ್ ಮತ್ತವರ ಆಪ್ತರು 16 ಬೇನಾಮಿ ಸಂಸ್ಥೆಗಳ ಮೂಲಕ ಹಣ ಚಲುವೆ ಮಾಡಿದ್ದಾರೆ ಎಂದು ಆರೋಪಿಸಿದ್ದರು ಮತ್ತು ‘ಆಪ್’ ಪಡೆದಿದೆ ಎನ್ನಲಾಗಿರುವ ಡೊನೇಷನ್‌ನ ಎರಡು ಚೆಕ್‌ಗಳನ್ನು ಪ್ರದರ್ಶಿಸಿದ್ದರು.  ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಇಂತಹ ಹಲವು ಚೆಕ್‌ಗಳನ್ನು ತಂದು ನಿಮಗೆ ತೋರಿಸಬಲ್ಲೆ. ಈ ಚೆಕ್‌ಗಳನ್ನು ಬರೆದವರಾರು ಮತ್ತು ಯಾರ ಹೆಸರಿಗೆ ಬರೆದಿದ್ದಾರೆ ಎಂಬದೇ ತಿಳಿದಿಲ್ಲ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಕಪಿಲ್ ಮಿಶ್ರಾ ಪ್ರದರ್ಶಿಸಿದರು. ಅವರ ಬೂಟಾಟಿಕೆಯ ವರ್ತನೆ ಪತ್ರಿಕಾಗೋಷ್ಠಿಯನ್ನು ಹಾಸ್ಯಾಸ್ಪದವನ್ನಾಗಿಸಿತು ಎಂದು ಟೀಕಿಸಿದರು.

   ಆಪ್ ಪಕ್ಷದ ಖಾತೆಯಲ್ಲಿ ಜಮೆಯಾಗಿರುವ ಹಣಕ್ಕೂ ಆ ಪಕ್ಷ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಗೂ ಭಾರೀ ವ್ಯತ್ಯಾಸವಿದೆ ಎಂದು ಕಪಿಲ್ ಮಿಶ್ರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. 2013ರಲ್ಲಿ ‘ಆಪ್’ ಖಾತೆಯಲ್ಲಿ 45 ಕೋಟಿ ರೂ. ಇತ್ತು. ಪಕ್ಷದ ವೆಬ್‌ಸೈಟ್‌ನಲ್ಲಿ ಈ ಮೊತ್ತವನ್ನು 19 ಕೋಟಿ ರೂ. ಎಂದು ಹಾಗೂ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಕೇವಲ 9 ಕೋಟಿ ರೂ. ಎಂದು ತಿಳಿಸಲಾಗಿತ್ತು. ಇದೇ ರೀತಿ, 2014-15ರಲ್ಲಿ 65 ಕೋಟಿ ರೂ. ಇತ್ತು. ಆದರೆ ವೆಬ್‌ಸೈಟ್‌ನಲ್ಲಿ 27 ಕೋಟಿ ರೂ. ಮತ್ತು ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಕೇವಲ 32 ಕೋಟಿ ರೂ. ಎಂದು ತಿಳಿಸಲಾಗಿದೆ ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News