ಸಂಘಟಿತ ಹೋರಾಟದ ಹೊಸ ಯುಗ ಪ್ರಾರಂಭವಾಗಲಿ: ಅಬ್ದುಸ್ಸಲಾಂ ಪುತ್ತಿಗೆ

Update: 2017-05-14 14:57 GMT

ಮಂಗಳೂರು, ಮೇ 14: ಸಾಮಾಜಿಕವಾಗಿ ಮುಸ್ಲಿಮರು ಪರಸ್ಪರ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿರುವುದು ಸಮುದಾಯದ ಪಾಲಿಗೆ ಅಪಾಯಕಾರಿಯಾಗಿದೆ. ಪ್ರತ್ಯೇಕತೆಯಿಂದಾಗಿ ನಮ್ಮ ನಡುವೆ ನಾವೇ ಗೋಡೆ ಕಟ್ಟಿದಂತಾಗಿದ್ದು, ಇಂತಹ ಗೋಡೆಯನ್ನು ಕೆಡವಿ ಸಂಘಟಿತ ಹೋರಾಟದ ಹೊಸ ಯುಗ ಆರಂಭಿಸಬೇಕಾಗಿದೆ ಎಂದು ‘ವಾರ್ತಾಭಾರತಿ’ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಬಲ್ಮಠದ ಶಾಂತಿನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಆಯೋಜಿಸಿರುವ ಎರಡು ದಿನಗಳ "ಮುಸ್ಲಿಂ ಯುವ ಸಮಾವೇಶ"ದಲ್ಲಿ ‘ಮುಸ್ಲಿಂ ಸಮುದಾಯದ ಸಾಮಾಜಿಕ ಶೈಕ್ಷಣಿಕ ಹಿಂದುಳಿದಿರುವಿಕೆ’ ವಿಷಯದ ಬಗ್ಗೆ ಅವರು ಮಾತನಾಡಿದರು.

ಮುಸ್ಲಿಮ್ ಸಮುದಾಯವು ಶೈಕ್ಷಣಿಕವಾಗಿ ಇನ್ನೂ ಮುಂದುವರಿಯಬೇಕಾದ ಅಗತ್ಯವಿದೆ. ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕೇವಲ ಶೇ. 4ರಷ್ಟಿದೆ. ಬಾಬರಿ ಮಸೀದಿ ಧ್ವಂಸ ಸಮಸ್ಯೆ, ಮೈಕ್‌ನ ಸಮಸ್ಯೆ, ತ್ರಿವಳಿ ತಲಾಕ್ ಸಮಸ್ಯೆ ಹೀಗೆ ಸಮಸ್ಯೆಗಳ ಬಗ್ಗೆ ಜೀವಮಾನವಿಡೀ ಚರ್ಚಿಸುತ್ತಿರುವುದರ ಬದಲು ಸಮಸ್ಯೆಯ ಮೂಲವನ್ನು ಹುಡುಕಿ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದರು.

"ಪ್ರಜಾವಾಣಿ" ದೈನಿಕದ ಸಹಾಯಕ ಸಂಪಾದಕ ಎನ್.ಎ.ಎಂ. ಇಸ್ಮಾಯೀಲ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಮುದಾಯ ಚಿಂತನೆ ನಡೆಸಬೇಕೆಂದರು.

ಎಲ್ಲಾ ಸೌಲಭ್ಯಗಳಿರುವ ಇಂದಿನ ಕಾಲದಲ್ಲಿ ಶಿಕ್ಷಣ ದೂರದ ಮಾತಲ್ಲ. ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಕೆಲಸವಾಗಬೇಕು. ಇದು ಸಮುದಾಯದ ಜವಾಬ್ದಾರಿಯೂ ಕೂಡ. ಆದ್ದರಿಂದ ಕಲಿಕೆ ಶಿಕ್ಷಣದ ಮುಖ್ಯ ಭಾಗವಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News