ಕಾಶ್ಮೀರದ ಜನಸಂಖ್ಯಾ ಸ್ವರೂಪ ಬದಲಿಸಲು ಭಾರತದ ಸಂಚು : ವಿಶ್ವಸಂಸ್ಥೆಗೆ ಪಾಕ್ ಪತ್ರ

Update: 2017-05-14 15:48 GMT

ಇಸ್ಲಾಮಾಬಾದ್,ಮೇ 14: ಭಾರತ ಸರಕಾರವು ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸಲು ಯತ್ನಿಸುತ್ತಿರುವುದಾಗಿ ಪಾಕಿಸ್ತಾನವು ಶನಿವಾರ ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರನ್ನು, ಅಲ್ಪಸಂಖ್ಯಾತರನ್ನಾಗಿಸಲು ಹೊಸದಿಲ್ಲಿ ಸಂಚು ನಡೆಸಿದೆಯೆಂದು ಪತ್ರವು ಆರೋಪಿಸಿರುವುದಾಗಿ, ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಯು ಪಾಕ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕಾಶ್ಮೀರದಲ್ಲಿ ಈಗ ಅನಿವಾಸಿಗಳಿಗೂ, ಭಾರತ ಸರಕಾರವು ಖಾಯಂ ವಾಸ್ತವ್ಯದ ಪ್ರಮಾಣಪತ್ರಗಳನ್ನು ವಿತರಿಸತೊಡಗಿದೆ ಹಾಗೂ ಕಾಶ್ಮೀರಿ ಪಂಡಿತರು ಮತ್ತು ಪೂರ್ವ ಪಾಕಿಸ್ತಾನದ ನಿರಾಶ್ರಿತರಿಗಾಗಿ ಪ್ರತ್ಯೇಕ ಟೌನ್‌ಶಿಪ್‌ಗಳನ್ನು ಅದು ಸ್ಥಾಪಿಸುತ್ತಿದೆಯೆಂದು ಪತ್ರವು ಆರೋಪಿಸಿದೆ.

ಪಾಕ್ ಪ್ರಧಾನಿ ನವಾಝ್ ಶರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾದ ಸರ್ತಾಜ್ ಅಝೀಝ್ ಈ ಪತ್ರವನ್ನು ಬರೆದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಅವರು ಈ ಪತ್ರವನ್ನು ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮಹಾಅಧೀನ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಷ್ಠಾನಕ್ಕೆ ತಾರದಿರುವುದರಿಂದ ಕಾಶ್ಮೀರಕಣಿವೆಯಲ್ಲಿ ಘೋರವಾದ ಮಾನವೀಯ ದುರಂತ ಸಂಭವಿಸಿದೆ ಎಂದು ಅಝೀಜ್ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ, ಪಾಕ್ ಮೂಲದ ಸುದ್ದಿಸಂಸ್ಥೆಯಾದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಜಾರಿಯಿಂದ ಮಾತ್ರವೇ ಜಮ್ಮುಕಾಶ್ಮೀರದಲ್ಲಿರುವ ಲಕ್ಷಾಂತರ ಕಾಶ್ಮೀರಿಗಳ ಅಪಾರವಾದ ಯಾತನೆಯನ್ನು ಕೊನೆಗೊಳಿಸಲು ಹಾಗೂ ದಕ್ಷಿಣ ಏಶ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಸಾಧ್ಯವಾಗಲಿದೆಯೆಂದು ಪತ್ರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News