ಉತ್ತರ ಕೊರಿಯದಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

Update: 2017-05-14 15:55 GMT

ಸಿಯೋಲ್,ಮೇ 14: ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿಯದ ಉತ್ತರ ಕೊರಿಯವು ರವಿವಾರ ಮತ್ತೆ ಪ್ರಕ್ಷೇಪಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಮುಂಜಾನೆ ಕುಸೊಂಗಿಲ್ ಎಂಬಲ್ಲಿಂದ ಉ.ಕೊರಿಯವು 700 ಕಿ.ಮೀ. ದೂರವ್ಯಾಪ್ತಿಯ ಕ್ಷಿಪಣಿಯನ್ನು ಉಡಾಯಿಸಿದೆ. ಉ.ಕೊರಿಯದ ಈ ಕ್ಷಿಪಣಿ ಪರೀಕ್ಷೆಯನ್ನು ನೆರೆಹೊರೆಯ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಹಾಗೂ ಜಪಾನ್ ತೀವ್ರವಾಗಿ ಖಂಡಿಸಿವೆ.

ಉ.ಕೊರಿಯ ಸಮೀಪದ ಜಪಾನ್ ಸಮುದ್ರದಲ್ಲಿ ಕ್ಷಿಪಣಿಯು ಪತನಗೊಳ್ಳುವ ಮುನ್ನ ಅದು ಮೂವತ್ತು ನಿಮಿಷಗಳ ಕಾಲ ಸಂಚರಿಸಿತ್ತೆಂದು ಜಪಾನ್ ತಿಳಿಸಿದೆ. ಕಳೆದ ತಿಂಗಳು ಉತ್ತರ ಕೊರಿಯ ನಡೆಸಿದ್ದ ಎರಡೂ ಕ್ಷಿಪಣಿ ಪರೀಕ್ಷೆಗಳು ವಿಫಲಗೊಂಡಿದ್ದವು.

ನೂತನ ಕ್ಷಿಪಣಿ ಪರೀಕ್ಷೆಯಿಂದ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ನಿರ್ಣಾಯಕವಾದ ಪರಿಣಾಮ ಬೀರುವ ಸಾಧ್ಯತೆಯಿದೆ. ಉತ್ತರ ಕೊರಿಯ ಕ್ಷಿಪಣಿ ಪರೀಕ್ಷೆ ಕಾರ್ಯಕ್ರಮವನ್ನು ಮುಂದುವರಿಸಿದಲ್ಲಿ ಗುರುತರವಾದ ಪ್ರತ್ಯುತ್ತರ ನೀಡುವುದಾಗಿ ಅಮೆರಿಕ ಈ ಮೊದಲು ಎಚ್ಚರಿಕೆ ನೀಡಿತ್ತು. ಆದರೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆದರಿಕೆಗೆ ಮಣಿಯದೆ ಉ.ಕೊರಿಯ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಆ ಪ್ರದೇಶದಲ್ಲಿ ಸಂಘರ್ಷದ ಭೀತಿಗೆ ಕಾರಣವಾಗಿದೆ.
 

ಕ್ಷಿಪಣಿ ಪರೀಕ್ಷೆ ಖಂಡಿಸಿದ ಟ್ರಂಪ್

ಉತ್ತರ ಕೊರಿಯ ರವಿವಾರ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ ದೇಶದ ವಿರುದ್ಧ ಕಠಿಣವಾದ ನಿರ್ಬಂಧಗಳನ್ನು ವಿಧಿಸುವಂತೆ ಕರೆ ನೀಡಿದ್ದಾರೆ.

ಕ್ಷಿಪಣಿ ಪರೀಕ್ಷೆಗೆ ಕೆಲವೇ ತಾಸುಗಳ ಮೊದಲು ಅಮೆರಿಕದ ಖಜಾನೆ ಇಲಾಖೆ ಹೇಳಿಕೆಯೊಂದನ್ನು ನೀಡಿ, ಉತ್ತರ ಕೊರಿಯದ ಅಕ್ರಮ ಚಟುವಟಿಕೆಗಳಿಗೆ ದೊರೆಯುವ ಅಂತಾರಾಷ್ಟ್ರೀಯ ಹಣಕಾಸು ನೆರವನ್ನು ತಡೆಗಟ್ಟಲು ಅಮೆರಿಕವು ತನ್ನ ‘ಬತ್ತಳಿಕೆಯಲ್ಲಿರುವ ಎಲ್ಲಾ ಬಾಣಗಳನ್ನು’ ಪ್ರಯೋಗಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತ್ತು.. ಉತ್ತರ ಕೊರಿಯ ವಿರುದ್ಧ ಸೇನಾಕ್ರಮವನ್ನು ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರಾದರೂ, ಇತ್ತೀಚಿನ ದಿನಗಳಲ್ಲಿ ಅವರು ತನ್ನ ನಿಲುನನ್ನು ಮೃದುಗೊಳಿಸಿದ್ದರು.

ಸೂಕ್ತ ಸನ್ನಿವೇಶದಲ್ಲಿ ಉ.ಕೊರಿಯ  ನಾಯಕ ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗಲು ತಾನು ಬಯಸುವುದಾಗಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News