ಸೂಫಿಗಳಿಂದಲೇ ದೇಶದ ಪರಂಪರೆ ಶ್ರೀಮಂತ-ಸಮೃದ್ಧ: ಪ್ರೊ.ರಹ್ಮತ್ ತರೀಕೆರೆ
ಮಂಗಳೂರು, ಮೇ 13: ಸಮುದಾಯದ ಶ್ರೀಮಂತಿಕೆ ಇರುವುದು ಸಾಂಸ್ಕೃತಿಕ ಆಚರಣೆಗಳಿಂದಾಗಿ. ಸೂಫಿಗಳಿಂದಲೇ ಈ ದೇಶದ ಪರಂಪರೆ ಶ್ರೀಮಂತ ಮತ್ತು ಸಮೃದ್ಧವಾಗಿದೆ. ಜನರ ಬದುಕು ಸುಂದರಮಯ ಮಾಡಲು ಸಾಂಸ್ಕೃತಿಕ ಬದುಕು ಬೇಕಾಗಿದೆ ಎಂದರು. ಸಂಪ್ರದಾಯಗಳ ನಡುವೆಯೂ ಮುಸ್ಲಿಮರು ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ಪ್ರೊ.ರಹ್ಮತ್ ತರೀಕೆರೆ ಹೇಳಿದ್ದಾರೆ.
ಮಂಗಳೂರಿನ ಬಲ್ಮಠದ ಶಾಂತಿನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಆಯೋಜಿಸಿರುವ ಎರಡು ದಿನಗಳ "ಮುಸ್ಲಿಂ ಯುವ ಸಮಾವೇಶ"ದಲ್ಲಿ ‘ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲಿ ಮುಸ್ಲಿಮರ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಸಂಗೀತ ದಿಗ್ಗಜರು ಧರ್ಮದ ಚೌಕಟ್ಟು ಮತ್ತು ಸಂಪ್ರದಾಯಗಳನ್ನು ಮೀರಿ ಸಮುದಾಯದ ಹಲವು ಪ್ರತಿಭೆಗಳಾಗಿ ಇಂದು ದೇಶವ್ಯಾಪ್ತಿ ಗುರುತಿಸಿಕೊಂಡಿದ್ದಾರೆ. ಸಂಗೀತದಲ್ಲಿ ಅಮೀರ್ ಖುಸ್ರೋನಿಂದ ಹಿಡಿದು ಇಲ್ಲಿಯವರೆಗೂ ಸಾಂಸ್ಕೃತಿಕವಾಗಿ ಮುಸ್ಲಿಮರು ದೇಶಕ್ಕೆ ನೀಡಿದ ಕೊಡುಗೆಗಳು ಸ್ಮರಣೀಯವಾಗಿದೆ. ಸಂಗೀತ ಮಾತ್ರವಲ್ಲದೆ, ಚಿತ್ರಕಲೆ, ಸಿನೆಮಾ ರಂಗದಲ್ಲೂ ಅವರ ಕೊಡುಗೆ ಅಪಾರವಾದುದು ಎಂದು ತರೀಕೆರೆ ಹೇಳಿದರು.
ಇಡೀ ಭಾರತದ ಸಂಗೀತ ಲೋಕವನ್ನು ದಿಗ್ಭ್ರಮೆಗೊಳಿಸುತ್ತಿರುವ ಪ್ರತಿಭೆ ಎಂದರೆ ಮುಖ್ತಾರ್ ಅಲಿ. ಸಾಂಸ್ಕೃತಿಕ ಲೋಕದಲ್ಲಿ ಮುಸ್ಲಿಂ ಪ್ರತಿಭೆಗಳು ಧಾರ್ಮಿಕ ಚೌಕಟ್ಟನ್ನು ಮೀರಿ ಮಾತನಾಡಬೇಕಾಗುತ್ತದೆ. ಇದು ಮುಸ್ಲಿಂ ಪ್ರತಿಭೆಗಳಿಗೆ ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಧರ್ಮ ಮತ್ತು ಸಂಪ್ರದಾಯದ ಚೌಕಟ್ಟು ಮೀರಿದವರೇ ಇಂದು ಆ ಕ್ಷೇತ್ರದಲ್ಲಿ ದೊಡ್ಡ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ಸಂಗೀತ, ರಂಗಭೂಮಿ, ಚಿತ್ರಲೋಕ, ಚಿತ್ರಕಲೆ ಮೊದಲಾದ ರಂಗಗಳಲ್ಲೂ ಮುಸ್ಲಿಮರ ಭಾಗವಹಿಸುವಿಕೆಯನ್ನು ಗುರುತಿಸಬಹುದಾಗಿದೆ ಎಂದರು.
ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ, ಪ್ರದೇಶಗಳಲ್ಲಿ ಮುಸ್ಲಿಮರು ಸೃಷ್ಟಿಸಿರುವ ಅನೇಕ ವೈವಿಧ್ಯತೆಗಳಿವೆ. ಈ ವೈವಿಧ್ಯತೆಯಲ್ಲಿ ಸ್ಥಳೀಯತೆ, ಬಹುತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸುಮಾರು 5,000 ಮೊಹರಂ ಹಾಡುಗಳನ್ನು ಹಾಡಲಾಗುತ್ತದೆ. ಒಟ್ಟಾರೆ ವ್ಯಕ್ತಿ ಪ್ರತಿಭೆ, ಸಾಹಿತ್ಯ ಪ್ರತಿಭೆ, ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಬಹುದು. ಆದರೂ ಇಂದಿನ ಯುಗದಲ್ಲಿ ಸಂಗೀತ ಲೋಕದಲ್ಲಿನ ಕೊಂಡಿ ಒಂದೊಂದಾಗಿ ಕಳಚಿ ಹೋಗುತ್ತಿರುವುದು ದುರದೃಷ್ಟಕರ ಎಂದರು.
ಪ್ರೊ. ರಹಮತ್ ತರೀಕೆರೆ ಉಪನ್ಯಾಸದ ಬಳಿಕ ಸಭಿಕರೊಂದಿಗೆ ಸಂವಾದ ನಡೆಯಿತು. ನಂತರ ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.