×
Ad

ಜಲೀಲ್ ಕರೋಪಾಡಿ ಹತ್ಯೆಯ ಹಿಂದಿರುವ ವ್ಯಕ್ತಿಗಳ ಶೀಘ್ರ ಬಂಧನ: ಸಚಿವ ರೈ

Update: 2017-05-14 22:21 IST

ಬಂಟ್ವಾಳ, ಮೇ 14: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳನ್ನು ಬಂಧಿಸುವ ಮೂಲಕ ಮೊದಲ ಹಂತದ ಕಾರ್ಯವನ್ನು ಪೊಲೀಸರು ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸಲಿದ್ದು ಅವರಿಗೂ ಖಂಡಿತ ಶಿಕ್ಷೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. 

ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಹಾತ್ಮಾ ಗಾಂಧಿ ಶಾಂತಿ ಸೌಹಾರ್ದ ವೇದಿಕೆಯ ಆಶ್ರಯದಲ್ಲಿ ರವಿವಾರ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆದ ಅಬ್ದುಲ್ ಜಲೀಲ್ ಕರೋಪಾಡಿ ಅವರ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಜಲೀಲ್ ಕರೋಪಾಡಿ ಸರ್ವ ಧರ್ಮಿಯರು ಇಷ್ಟಪಡುವ ವ್ಯಕ್ತಿಯಾಗಿದ್ದೂ ಇಡೀ ಗ್ರಾಮದ ಜನರಿಗೆ ಬೇಕಾಗಿದ್ದವರಾಗಿದ್ದರು. ಅತ್ಯಂತ ಹಿಂದುಳಿದ ಗ್ರಾಮಗಳಾಗಿದ್ದ ಕನ್ಯಾನ, ಕರೋಪಾಡಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲು ಜಲೀಲ್ ಕರೋಪಾಡಿಯೂ ನನ್ನ ಜೊತೆ ಕೈ ಜೋಡಿಸಿದ್ದರು. ಜಲೀಲ್ ಕರೋಪಾಡಿ ಅವರ ಆತ್ಮಕ್ಕೆ ಸಮಾಧಾನ ಸಿಗುವ ರೀತಿಯಲ್ಲಿ ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಭಾವುಕರಾದರು.

ವಿಧಾನಪರಿಷತ್ತಿನ ಮುಖ್ಯಸಚೇತಕ ಐವನ್ ಡಿ’ಸೋಜ ಮಾತನಾಡಿ, ಸಾಮಾಜಿಕ ಪರಿವರ್ತನೆಯ ಕನಸು ಕಂಡಿದ್ದ ಜಲೀಲ್ ರವರ ಹತ್ಯೆ ಯಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ, ಅವರ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮಾತನಾಡಿ ಜಲೀಲ್ ಹತ್ಯೆ ಖಂಡನೀಯವಾಗಿದ್ದು ಎಲ್ಲಾ ಆರೋಪಿಗಳ ಬಂಧನವಾಗಬೇಕು ಎಂದು ಆಗ್ರಹಿಸಿದರು. ಸೌಹಾರ್ದ ವೇದಿಕೆ ಸಂಸ್ಥಾಪಕ ರವಿಶಂಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಜಲೀಲ್ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದು ಅವರ ಸಾವಿನ ಬಗ್ಗೆ ಇರುವ ಎಲ್ಲಾ ಅನುಮಾನಗಳನ್ನು ಸೂಕ್ತ ತನಿಖೆಯ ಮೂಲಕ ಬಗೆಹರಿಸಬೇಕಿದೆ, ಈ ನಿಟ್ಟಿನಲ್ಲಿ ಒಗ್ಗಟ್ಟಿನ ಹೋರಾಟ ಅಗತ್ಯ ಎಂದರು.
        
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸುರೇಶ್ ಬಲ್ಲಾಳ್, ಪುತ್ತೂರು ಶಾಸಕಿ ಶಕುಂತಳ ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಪುತ್ತೂರು ಎಪಿಎಂಸಿ ಸದಸ್ಯ ಬೂಡಿಯಾರು ರಾಧಾಕೃಷ್ಣ ರೈ, ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಹರಿಕೃಷ್ಣ ಬಂಟ್ವಾಳ, ಸುರೇಶ್ಚಂದ್ರ ಶೆಟ್ಟಿ, ರಾಜ್ಯ ಬಂಟರ ಸಂಘದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ವಿಶ್ವಾಸ್ ದಾಸ್, ಕರೋಪಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ವನಜ, ಜೆಡಿಎಸ್ ರಾಜ್ಯಾಧ್ಯಕ್ಷ ಮುಹಮ್ಮದ್ ಕುಂಞ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪಿ.ವಿ. ಮೋಹನ್, ಜಲೀಲ್ ಕರೋಪಾಡಿ ತಂದೆ ಉಸ್ಮಾನ್ ಕರೋಪಾಡಿ ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಜಲೀಲ್ ಕರೋಪಾಡಿ ಅಭಿಮಾನಿಗಳು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News