×
Ad

ರಾಜಕೀಯದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕೊರತೆ: ಪ್ರೊ. ಮುಝಾಫರ್ ಅಸ್ಸಾದಿ

Update: 2017-05-15 17:34 IST

ಮಂಗಳೂರು, ಮೇ 15: ರಾಜಕೀಯದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದ್ದು, ಮುಸ್ಲಿಮರಿಗೆ ಒಂದು ರಾಜಕೀಯ ಪಕ್ಷದ ಅನಿವಾರ್ಯತೆ ಇದೆ ಎಂದು ಮೈಸೂರು ವಿವಿಯ ರಾಜಕೀಯ ವಿಶ್ಲೇಷಕ ಪ್ರೊ. ಮುಝಾಫರ್ ಅಸ್ಸಾದಿ ಅಭಿಪ್ರಾಯಿಸಿದ್ದಾರೆ.

ಅವರು ಡಿವೈಎಫ್‌ಐ ವತಿಯಿಂದ ಬಲ್ಮಠದ ಶಾಂತಿ ನಿಲಯದಲ್ಲಿ ಆಯೋಜಿಸಲಾದ ಮುಸ್ಲಿಂ ಯುವ ಸಮಾವೇಶದ ಎರಡನೆ ದಿನವಾದ ಇಂದು ‘ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ, ಸಬಲೀಕರಣ’ ಎಂಬ ವಿಷಯದಲ್ಲಿ ಮಾತನಾಡಿದರು.

ಮುಸ್ಲಿಮರಿಗೆ ಅವಕಾಶ ನಿರಾಕರಣೆ ಮಾಡುತ್ತಾ ಬಂದ ಕಾರಣ ಇತರ ಕ್ಷೇತ್ರಗಳಂತೆ ರಾಜಕೀಯದಲ್ಲೂ ಮುಸ್ಲಿಮರ ಪ್ರಾತಿನಿಧ್ಯದ ಕೊರತೆ ಕಾಡುತ್ತಿದೆ.ರಾಜ್ಯದ ವಿಧಾನಸಭೆಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 11, ಲೋಕಸಭೆಯಲ್ಲಿ ಮುಸ್ಲಿಮರ ಸಂಖ್ಯೆ 23 ಇದು ಮುಸ್ಲಿಮರು ಭಾರತದಲ್ಲಿ ಪಡೆದಿರುವ ರಾಜಕೀಯ ಪ್ರಾತಿನಿಧ್ಯದ ಪ್ರತೀಕವಾಗಿದೆ. 1980 -1985 ರಲ್ಲಿ ಲೋಕಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಸುವರ್ಣ ಯುಗ ಎನ್ನಬಹುದು ಎಂದರು.

 ಧರ್ಮದ ಆಧಾರದಲ್ಲಿ ಮುಸ್ಲಿಂರಿಗೆ ಯಾವುದೇ ರೀತಿಯ ಮೀಸಲಾತಿ ಕೊಡಲಾಗುತ್ತಿಲ್ಲ. ದಲಿತ, ಮುಸ್ಲಿಂರ ಬಗ್ಗೆ ರಂಗನಾಥ್ ಮಿಶ್ರಾ ಆಯೋಗ ಕೂಲಂಕಷವಾದ ವರದಿಯನ್ನು ನೀಡಿತು.

ಮುಸ್ಲಿಮರು ಮುಸ್ಲಿಮರ ಬಗ್ಗೆ ಮಾತಾಡಿದರೆ ಅಂತಹವರನ್ನು ಕೋಮುವಾದಿ ಎನ್ನುತ್ತಾರೆ. ಇಂತಹ ನೆಲೆಯಲ್ಲಿ ಜಾತ್ಯತೀತ ನೆಲೆಯ ರಾಜಕೀಯ ಪಕ್ಷವೊಂದು ಮುಸ್ಲಿಮರಿಗೆ ಅಗತ್ಯವಾಗಿದೆ. ಅದು ದೊರೆತಾಗ ಎಲ್ಲಾ ರೀತಿಯ ತಲ್ಲಣಗಳಿಂದ ಹೊರಬರಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಬಡತನ, ನಿರುದ್ಯೋಗ, ಮುಸಲ್ಮಾನರ ಸಮಸ್ಯೆ ಎಂದು ಹೇಳಲಾಗುತ್ತದೆ. ಆದರೆ ನನ್ನ ಅನಿಸಿಕೆ ಪ್ರಕಾರ ಅದು ಮೂಲ ಸಮಸ್ಯೆಯಲ್ಲ. ಜೀವಭದ್ರತೆ ಇಲ್ಲದಿರುವುದು ಮುಖ್ಯ ಸಮಸ್ಯೆಯಾಗುತ್ತಿದೆ. ಇಂದು ಮುಸ್ಲಿಮರ ಪೈಕಿ ಶೇಕಡಾ 75 ರಷ್ಟು ಮುಸ್ಲಿಮರು ಪ್ರತಿ ದಿನ ಕೇವಲ 12 ರೂಪಾಯಿಯಲ್ಲಿ ಜೀವನ ನಡೆಸುವಂತಹ ಬಡವರಾಗಿದ್ದಾರೆ. ಹೀಗಾಗಿ ಭದ್ರತೆ ಮುಸ್ಲಿಮರ ಮೂಲ ಸಮಸ್ಯೆಯಾಗಿದೆ. ಕೋಮುಗಲಭೆಗಳು ಮುಸ್ಲಿಮರನ್ನು ಪ್ರಗತಿಯಿಂದ ಹಿಂದಕ್ಕೆ ತಳ್ಳುತ್ತಿವೆ ಎಂದು ಅವರು ವಿಶ್ಲೇಷಿಸಿದರು.
 

ಗೋಹತ್ಯೆಯ ವಿಷಯ ಬಂದಾಗ ಒಂದು ರೀತಿಯ ರಾಜಕೀಯ ಬಣ್ಣ ಎದುರಾಗುತ್ತದೆ. ಆದರೆ ದನದ ಮಾಂಸ ಸೇವಿಸುವ ಮುಸ್ಲಿಮರ ಸಂಖ್ಯೆ ಶೇ. 50 ರಷ್ಟಿರಬಹುದು. ಉರ್ದು ವಾಸ್ತವವಾಗಿ ಎಲ್ಲಾ ಮುಸ್ಲಿಮರ ಭಾಷೆಯಲ್ಲ, ಶೇಕಡಾ 49 ರಷ್ಟು ಮುಸ್ಲಿಮರು ಉರ್ದುಯೇತರ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ಪದೇ ಪದೇ ಉರ್ದು ಭಾಷೆ ಮುಸ್ಲಿಮರ ಭಾಷೆ ಎಂದು ಬಿಂಬಿಸಿ ಆ ಭಾಷೆಯನ್ನು ತುಳಿತಕ್ಕೊಳಪಡಿಸಲಾಯಿತು. ರಾಜಕಾರಣ ಭಾಷೆ, ಜಾತಿ ಧರ್ಮ ಯಾವುದನ್ನೂ ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಮುಸ್ಲಿಮರು ಎಂತಹ ಸ್ಥಿತಿಯಲ್ಲಿ ಇದ್ದಾರೆ ಎಂದರೆ ಅಸ್ಮಿತೆಯ ತಲ್ಲಣಗಳು ನಮ್ಮನ್ನು ಕಾಡುತ್ತಿವೆ ಎಂದ ಪ್ರೊ. ಅಸ್ಸಾದಿ ಟೋಪಿ, ಗಡ್ಡ ಶೇರ್ವಾನಿ, ಬುರ್ಖಾಗಳು ಐಡೆಂಟಿಟಿ ಚಿಹ್ನೆಗಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸುತ್ತಿವೆ ಎಂದರು. ಎಲ್ಲ ಮುಸ್ಲಿಮರು ಉಗ್ರರಲ್ಲ ಆದರೆ ಉಗ್ರರೆಲ್ಲ ಮುಸ್ಲಿಮರೇ ಎಂದು ರಾಜಕೀಯ ನೇತಾರರೊಬ್ಬರು ಹೇಳಿಕೆ ನೀಡಿದ್ದರು, ಅದು ಮುಸ್ಲಿಮರ ಬಗೆಗೆ ರೂಪಿಸಿದ ಒಂದು ಕೆಟ್ಟ ಅಭಿಪ್ರಾಯಕ್ಕೆ ಒಂದು ಉದಾಹರಣೆ ಎಂದರು.
 

ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಮನೆ ಬಾಡಿಗೆ ಸಿಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ನಮಗೆ ಪ್ರವೇಶಾತಿ ಸಿಗುವುದಿಲ್ಲ, ಇದು ಮುಸ್ಲಿಂ ಸಮುದಾಯ ಎಂತಹ ಭಯಸ್ಥ ಸ್ಥಿತಿಯಲ್ಲಿದೆ ಎಂಬುದರ ಸೂಚಕ ಎಂದು ಪ್ರೊ. ಅಸ್ಸಾದಿ ಕಳವಳ ವ್ಯಕ್ತಪಡಿಸಿದರು.

ರಾಜಕೀಯ ಸ್ಥಾಮಾನದ ಬಗ್ಗೆ ಚರ್ಚೆ ಆಗಬೇಕಿದೆ: ಅಮಾನುಲ್ಲಾ ಖಾನ್

 ಮುಸಲ್ಮಾನರಿಗೆ ರಾಜಕೀಯವಾಗಿ ಸ್ಥಾನಮಾನ ಇಲ್ಲದಿರುವ ಬಗ್ಗೆ ಚರ್ಚೆಗಳು ಆರಂಭವಾಗಬೇಕಿದೆ ಎಂದು ಎಐಐಇಎಯ ರಾಷ್ಟ್ರಾಧ್ಯಕ್ಷ ಅಮಾನುಲ್ಲಾ ಖಾನ್ ಅಭಿಪ್ರಾಯಿಸಿದರು.

ಸಬಲೀಕರಣ ನೀತಿಗಳನ್ನು ಅನುಸರಿಸದೆ, ಕೇಂದ್ರ ಸರಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಅರ್ಥವಿಲ್ಲ ಎಂದು ಹೇಳಿದ ಅವರು, ರಾಜಕೀಯದಲ್ಲಿ ಮುಸ್ಲಿಮರನ್ನು ನಿರ್ನಾಮ ಮಾಡಲಾಗಿದೆ ಎಂದು ಹೇಳಿದ ಅಮಾನುಲ್ಲಾ ಅವರು ಉತ್ತರ ಪ್ರದೇಶದಲ್ಲಿ 3.5 ಕೋಟಿ ಜನ ಮುಸ್ಲಿಮರಿದ್ದಾರೆ. ಒಟ್ಟು ಜನಸಂಖ್ಯೆ 20 ಕೋಟಿ ಇದ್ದಾರೆ. 3.5 ಕೋಟಿ ಮುಸ್ಲಿಮರ ಪೈಕಿ ರಾಜಕೀಯವಾಗಿ ಪ್ರತಿನಿಧಿಸುವವರ ಸಂಖ್ಯೆ ಎಷ್ಟು? ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ 80 ಲಕ್ಷ ಇದ್ದಾರೆ ಆದರೆ ಕರ್ನಾಟಕದ ಮುಸ್ಲಿಮರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವವರೇ ಇಲ್ಲ ಎಂದರೆ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ಸ್ಥಿತಿ ಏನೆಂದು ಅರ್ಥವಾಗುತ್ತದೆ. ಇಷ್ಟು ಮಾತ್ರವಲ್ಲದೆ ಆರು ಕೇಂದ್ರಾಡಳಿತ ಪ್ರದೇಶಗಳಿಂದಲೂ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲ ಎಂದು ಅಮಾನುಲ್ಲಾ ಖಾನ್ ಹೇಳಿದರು.

ಮುಸ್ಲಿಮರ ಬದುಕು ಸವಾಲಿನಿಂದ ಕೂಡಿದೆ, ಶಿಕ್ಷಣ, ಉದ್ಯೋಗ, ನೈಜವಾದ ಸಮಸ್ಯೆಗಳು. ಎಲ್ಲರಿಗೂ ಇದರ ಅಗತ್ಯವಿಲ್ಲದಿದ್ದರೂ, ಚರ್ಚೆಯ ಆರಂಭವನ್ನು ನಾವು ಮಾಡಬೇಕಾಗಿದೆ. ಶಿಕ್ಷಣದಲ್ಲಿ ಸಮುದಾಯದ ಹಿಂದುಳಿದಿರುವಿಕೆಗೆ ಕಾರಣ ಏನೆಂಬುದರ ಬಗ್ಗೆ ಎಂದು ಚರ್ಚಿಸಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.

ರಾಜಕೀಯ ಬದಲಾದಾಗಲೂ ಭಾರತದ ಆರ್ಥಿಕ ನೀತಿಗಳು ಬದಲಾಗುವುದಿಲ್ಲ, ಉದಾಹರಣೆಗೆ ಆಧಾರ್ ಕಡ್ಡಾಯವನ್ನು ವಿರೋಧಿಸಿದ ಬಿಜೆಪಿ ಇಂದು ಎಲ್ಲಾ ರಂಗಗಳಗಲ್ಲೂ ಅದನ್ನು ಕಡ್ಡಾಯಗೊಳಿಸುತ್ತಿದೆ. ನವ ಉದಾರೀಕರಣ ಆರ್ಥಿಕ ನೀತಿಗಳಿಂದಾಗಿ ಮುಸ್ಲಿಂ ಬಾಹುಳ್ಯ ಉಳ್ಳ ಎಲ್ಲಾ ಕಾರ್ಖಾನೆಗಳೂ ನಶಿಸಿ ಹೋಗುತ್ತಿವೆ. ಮಾಲ್ ಸಂಸ್ಕೃತಿಯಿಂದಾಗಿ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರ ಅಂಗಡಿಗಳು ನೆಲಕ್ಕಚ್ಚುತ್ತಿವೆ. ಈ ದಿಸೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳು ಒಂದೇ ಆಗಿವೆ. ಈ ಎಲ್ಲಾ ಕಾರಣಗಳಿಗಾಗಿ ಮುಸ್ಲಿಂ ಯುವಕರು ಇಂದು ಅವರಿಗೆ ಬೇಕಾದ ರಾಜನೀತಿ ಯಾವುದೆಂದು ಅವರೇ ರೂಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News