ಮಾಧ್ಯಮದೊಳಗೆ ನುಸುಳುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಜಾಗೃತಿ ಅಗತ್ಯ: ಪ್ರೊ.ಕೆ.ಫಣಿರಾಜ್
ಮಂಗಳೂರು, ಮೇ 15: ಮಾಧ್ಯಮದ ಬೌದ್ಧಿಕ ವಲಯದೊಳಗೆ ಕೋಮುವಾದಿ ಶಕ್ತಿಗಳು ನುಸುಳುತ್ತಿರುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಪ್ರೊ.ಕೆ.ಫಣಿರಾಜ್ ತಿಳಿಸಿದ್ದಾರೆ.
ಡಿವೈಎಫ್‌ಐ ವತಿಯಿಂದ ನಗರದ ಬಲ್ಮಠ ಶಾಂತಿ ನಿಲಯದಲ್ಲಿ ಹಮ್ಮಿಕೊಂಡಿರುವ ಮುಸ್ಲಿಂ ಯುವ ಸಮಾವೇಶದ ಎರಡನೆ ದಿನದ ‘ಮಾಧ್ಯಮ,ಪೂರ್ವಾಗ್ರಹ ಮತ್ತು ಮುಸ್ಲಿಮರು’ ಎಂಬ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ್ಯ ಹೋರಾಟ, ಬಂಡವಾಳಶಾಹಿಗಳ ವಿರುದ್ಧ ಪ್ರಶ್ನಿಸುತ್ತಾ ಬಂದಿರುವ ಮಾಧ್ಯಮಗಳು ಇದ್ದಕ್ಕಿಂದಂತೆ 1990ರ ಬಳಿಕ ತಮ್ಮ ಧೋರಣೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಹಿಂದುತ್ವದ ರಾಜಕೀಯ ಮತ್ತು ಸಂಘಪರಿವಾರದ ಗುಪ್ತ ಅಜೆಂಡಾಗಳು ಕಾರಣವಾಗಿವೆ. ಭಯೋತ್ಪಾಧನೆಯ ಹೆಸರಿನಲ್ಲಿ ಬಂಧನಕ್ಕೊಳಗಾಗಿ ಬಳಿಕ ಆರೋಪ ಸಾಬೀತಾಗದೆ ಜೈಲಿನಿಂದ ಹೊರಬರುವ ನಿರಪರಾಧಿಗಳ ಬಗ್ಗೆ ಮಾಧ್ಯಮಗಳು ಮೌನವಹಿಸಲು ಈ ರೀತಿಯ ಧೋರಣೆ ಕಾರಣವಾಗಿವೆ. ಮಾಧ್ಯಮಗಳ ಪೂರ್ವಾಗ್ರಹ ಧೋರಣೆಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾದ ವಿಷಯವೆಂದು ಪರಿಗಣಿಸಬಾರದು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಪೂರ್ವಾಗ್ರಹ ಪೀಡಿತ ಚಿಂತನೆಗಳ ವಿರುದ್ಧ ಸಮಾಜದ ಸಣ್ಣ-ಸಣ್ಣ ಗುಂಪುಗಳಲ್ಲಿ ಚರ್ಚಿಸಬೇಕಾಗಿದೆ, ಜಾಗೃತಿ ಮೂಡಿಸಬೇಕಾಗಿದೆ ಎಂದು ಫಣಿರಾಜ್ ತಿಳಿಸಿದರು.
ಲಜ್ಜೆ ಕಳೆದುಕೊಂಡ ಮಾಧ್ಯಮ
‘ವಾರ್ತಾಭಾರತಿ’ ದೈನಿಕದ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಮಾತನಾಡಿ, ಇಂದಿನ ಮಾಧ್ಯಮಗಳು ತಾನು ಮಾಡುವ ತಪ್ಪಿಗಾಗಿ ಲಜ್ಜೆಪಡಬೇಕಾಗಿಲ್ಲ, ಪಶ್ಚಾತ್ತಾಪ ಪಡಬೇಕಾಗಿಲ್ಲ ಎಂದು ಬಲವಾಗಿ ನಂಬಿರುವುದೇ ಎಲ್ಲ ದುರಂತಗಳಿಗೆ ಕಾರಣ ಎಂದು ಅಭಿಪ್ರಾಯ ಪಟ್ಟರು.
ಡಾ.ಹಸೀನಾ ಖಾದ್ರಿ ಗೋಷ್ಠಿಯನ್ನು ನಿರ್ವಹಿಸಿದರು.