×
Ad

ಸದ್ಯಕ್ಕೆ ತ್ರಿವಳಿ ತಲಾಖ್ ಬಗ್ಗೆ ಮಾತ್ರ ಪರಿಶೀಲನೆ: ಸುಪ್ರೀಂ

Update: 2017-05-15 20:08 IST

    ಹೊಸದಿಲ್ಲಿ,ಮೇ 15: ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ಬಹುಪತ್ನಿತ್ವ ಹಾಗೂ ನಿಖಾ ಹಲಾಲಾ ವಿಷಯಗಳ ಬಗ್ಗೆ ಭವಿಷ್ಯದಲ್ಲಿ ತೀರ್ಮಾನವನ್ನು ಕೈಗೊಳ್ಳುವ ಅವಕಾಶನ್ನು ತಾನು ಮುಕ್ತವಾಗಿಟ್ಟಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ. ತ್ರಿವಳಿ ತಲಾಖ್ ಜೊತೆ ಈ ಎರಡು ವಿಷಯಗಳ ಬಗ್ಗೆಯೂ ನ್ಯಾಯಾಲಯ ಅವಲೋಕನ ನಡೆಸಬೇಕಾದ ಅಗತ್ಯವಿದೆಯೆಂದು ಕೇಂದ್ರ ಸರಕಾರವು ಕೋರಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ಕೈಗೊಂಡಿದೆ.

  ‘‘ನಮಗಿರುವ ಸೀಮಿತ ಸಮಯದಲ್ಲಿ ಈ ಈ ಮೂರು ವಿಷಯಗನ್ನು ಒಟ್ಟಿಗೆ ನಿರ್ವಹಿಸಲು ಸಾಧ್ಯವಿಲ್ಲ. ಬಹುಪತ್ನಿತ್ವ ಹಾಗೂ ನಿಖಾ ಹಲಾಲಾ ಬಗ್ಗೆ ಭವಿಷ್ಯದಲ್ಲಿ ಅವಲೋಕನ ನಡೆಸಲಾಗುವುದು’’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ತಿಳಿಸಿದೆ.

    ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು ತ್ರಿವಳಿ ತಲಾಖ್ ಪದ್ಧತಿಯ ಜೊತೆಗೆ ಬಹುಪತ್ನಿತ್ವ ಹಾಗೂ ನಿಖಾ ಹಲಾಲಾ ವಿಷಯಗಳನ್ನು ಕೂಡಾ ಸಾಂವಿಧಾನಿಕ ಪೀಠದ ಪ್ರಸ್ತಾಪನೆಗೆ ಒಪ್ಪಿಸಿತ್ತು ಎಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದಾಗ, ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 ಸದ್ಯಕ್ಕೆ ತಾನು ತ್ರಿವಳಿ ತಲಾಖ್ ವಿಷಯವನ್ನು ಮಾತ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಈ ವಾದವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

    ಬಹುಪತ್ನಿತ್ವ ಹಾಗೂ ನಿಖಾ ಹಲಾಲಾ ಬಗ್ಗೆ ಅವಲೋಕನ ನಡೆಸಲು ನ್ಯಾಯಾಲಯವು ಈಗಲೂ ಮುಕ್ತವಕಾಶವನ್ನು ಹೊಂದಿದ್ದು,ಭವಿಷ್ಯದಲ್ಲಿ ಇನ್ನೊಂದು ನ್ಯಾಯಪೀಠವು ಅವುಗಳ ಅವಲೋಕನ ನಡೆಸಲಿದೆಯೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News