ದುಡಿಯುವ ವರ್ಗಕ್ಕೆ ಅಧಿಕಾರ ಸಿಗದೆ ಸಮಾನತೆ ಅಸಾಧ್ಯ: ಜಿ.ವಿ.ಶ್ರೀರಾಮರೆಡ್ಡಿ
ಮಂಗಳೂರು, ಮೇ 15: ದುಡಿಯುವ ವರ್ಗಕ್ಕೆ ಅಧಿಕಾರ ಸಿಗುವವರೆಗೆ ದೇಶದಲ್ಲಿ ಸಮಾನತೆ ಸಿಗದು ಎಂದು ಮಾಜಿ ಶಾಸಕ ಹಾಗೂ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಲ್ಮಠದ ಶಾಂತಿನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಆಯೋಜಿಸಿರುವ ಎರಡು ದಿನಗಳ ಮುಸ್ಲಿಂ ಯುವ ಸಮಾವೇಶದಲ್ಲಿ ‘ರಾಜಕೀಯ ದ್ರುವೀಕರಣ ದಮನಿತ ಸಮುದಾಯಗಳ ಐಕ್ಯತೆ’ ವಿಷಯದ ಬಗ್ಗೆ ಮಾತನಾಡಿದರು.
ಆರ್ಥಿಕ ಶೋಷಣೆ, ಸಾಮಾಜಿಕ ಶೋಷಣೆ, ಅಸಮಾನತೆಗೊಳಗಾದ, ತುಳಿತಕ್ಕೊಳಗಾದವರೆಲ್ಲೂ ದಮನಿತರಾಗಿದ್ದಾರೆ. ಶೋಷಣೆಕ್ಕೊಳಗಾದವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ. ಆದರೆ, ಇವರಲ್ಲಿ ಪ್ರತಿಭಟನಾ ಮನೋಭಾವ ಇಲ್ಲದಿರುವುದಿಂದ ಹೆಚ್ಚಾಗಿ ದಮನಿತರಾಗುತ್ತಿದ್ದಾರೆ ಎಂದರು.
ದೇಶದಲ್ಲಿ ಅಲ್ಪಸಂಖ್ಯಾತರ ಪೈಕಿ ದಲಿತರು ಮತ್ತು ಮುಸ್ಲಿಮರು ಶ್ರಮ ಜೀವಿಗಳು. ದೈನಂದಿನ ದುಡಿಮೆಗಾಗಿ ಯಾವ ಕೆಲಸ ಕೊಟ್ಟರೂ ಮಾಡಲು ಸಿದ್ಧರಿದ್ದಾರೆ. ಇಂತಹ ದುಡಿಯುವ ವರ್ಗದ ಕೈಗೆ ಅಧಿಕಾರ ಸಿಗುವಂತಾಗಬೇಕು. ಅವಮಾನಿತರು ಎಂದು ಹೇಳುವಾಗ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಆದರೆ, ಎರಡು ಹೊತ್ತಿನ ಊಟಕ್ಕಾಗಿ ಅನ್ಯರಲ್ಲಿ ಕೈ ಚಾಚಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದಕ್ಕಿಂತ ದೊಡ್ಡ ಅವಮಾನ ಇದೆಯೇ ಎಂದು ಶ್ರೀ ರಾಮರೆಡ್ಡಿ ಪ್ರಶ್ನಿಸಿದರು.
ಸಾಮಾಜಿಕ, ಆರ್ಥಿಕ ಅಸಮಾನತೆ ತೊಲಗಬೇಕು. ವ್ಯವಸ್ಥೆ ಬದಲಾಗಬೇಕು. ಇಂತಹ ಬದಲಾವಣೆ ತರಲು ದಮನಿತರಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ದಮನಿತರು ಐಕ್ಯರಾಗಬೇಕು. ಆದರೆ, ದಮನಿತರ ಐಕ್ಯತೆಯನ್ನು ಒಡೆಯಲು ಆಳುವ ವರ್ಗವು ಪಿತೂರಿ ನಡೆಸುತ್ತಿದೆ. ಇದಕ್ಕೆ ದಮನಿತರು ಬಲಿಯಾಗದೆ, ಎಚ್ಚರಿಕೆಯಿಂದಿರಬೇಕು. ಐಕ್ಯತೆಯನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.
‘ರಾಜಕೀಯ ದ್ರುವೀಕರಣ ದಮನಿತ ಸಮುದಾಯಗಳ ಐಕ್ಯತೆ’ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಬಿ.ಪೀರ್ ಬಾಷ ಮಾತನಾಡಿದರು.