×
Ad

2050ರಲ್ಲಿ ಪ್ರತಿ 5 ಭಾರತೀಯರಲ್ಲಿ ಒಬ್ಬಾತನಿಗೆ 60 ವರ್ಷ

Update: 2017-05-15 21:19 IST

ಹೊಸದಿಲ್ಲಿ, ಮೇ 15: ಪ್ರಸ್ತುತ ಯುವಜನರು ಅಧಿಕ ಸಂಖ್ಯೆಯಲ್ಲಿರುವ ದೇಶವಾದ ಭಾರತವು ನಿಧಾನವಾಗಿ ವೃದ್ಧರ ಬಾಹುಳ್ಯದ ದೇಶವಾಗಿ ಪರಿವರ್ತನೆಗೊಳ್ಳಲಿದೆ ಯೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. 2050ರೊಳಗೆ ಪ್ರತಿ 5 ಭಾರತೀಯರಲ್ಲಿ ಒಬ್ಬಾತ 60ರ ಹರೆಯದವನಾಗಿರುವನೆಂದು ಅದು ಹೇಳಿದೆ. ಪ್ರಸ್ತುತ ಪ್ರತಿ 12 ಮಂದಿಯಲ್ಲಿ ಓರ್ವ 60ರ ಹರೆಯದವನಾಗಿದ್ದಾನೆ.

‘‘ಯುವಜನರೇ ಅಧಿಕವಾಗಿರುವ ರಾಷ್ಟ್ರವಾದ ಭಾರತವು ವೃದ್ಧರ ದೇಶವಾಗಿ ಮಾರ್ಪಾಡಾಗುತ್ತಿದೆ. ಪ್ರಸ್ತುತ 60 ವರ್ಷಕ್ಕಿಂತ ಅಧಿಕ ವಯಸ್ಸಿನವರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ.8.9ರಷ್ಟಿದ್ದರೆ 2050ರ ವೇಳೆಗೆ ಅದು ಶೇ.19.4ಕ್ಕೇರಲಿದೆ’’ ಎಂದು ಪಿಎಫ್‌ಆರ್‌ಡಿಎ-ಸಿಆರ್‌ಐಎಸ್‌ಐಎಲ್ ವರದಿ ತಿಳಿಸಿದೆ.

ಈ ವರದಿಯ ಪ್ರಕಾರ 80 ವರ್ಷಕ್ಕಿಂತ ಅಧಿಕ ವಯೋಮಾನದ ಜನರ ಸಂಖ್ಯೆಯು ಈಗಿನ ಶೇ.0.9ಕ್ಕಿಂತ ಶೇ.2.8ಕ್ಕೇರಲಿದೆ.

ಭಾರತೀಯ ಕುಟುಂಬಗಳಲ್ಲಿ ಹಿರಿಯ ತಲೆಮಾರುಗಳಿಗೆ ಆಧಾರವಾಗುವ ವ್ಯವಸ್ಥೆ ನಿರಂತರವಾಗಿ ಕುಸಿಯತೊಡಗಿರುವುದರಿಂದ ಅತ್ಯುತ್ತಮವಾದ ಪಿಂಚಣಿ ವ್ಯವಸ್ಥೆಯನ್ನು ದೇಶವು ಹೊಂದುವುದು ಅನಿವಾರ್ಯವಾಗಿದೆಯೆಂದು ವರದಿ ಹೇಳಿದೆ.

    2015ರಲ್ಲಿ ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಮಂದಿ 60 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ ಹಾಗೂ ದುಡಿಯುವ ವಯಸ್ಸಿನವರ ಜನಸಂಖ್ಯೆ ಪ್ರಮಾಣವು ಶೇ.44ರಷ್ಟಿತ್ತು. ಉತ್ತಮವಾಗಿ ಅಭಿವೃದ್ಧಿಪಡಿಸಿದ ಪಿಂಚಣಿ ವ್ಯವಸ್ಥೆಯು ದೇಶದ ಬೊಕ್ಕಸದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವುದಲ್ಲದೆ, ದೇಶದ ಆರ್ಥಿಕತೆ ಮೇಲೆ ಸ್ಥಿರವಾದ ಪರಿಣಾಮವನ್ನು ಬೀರಲಿದೆ. ದೀರ್ಘಾವಧಿಯ ಉಳಿತಾಯ ಜೊತೆ ದೀರ್ಘಾವಧಿಯ ಹೂಡಿಕೆಗಳನ್ನು ಉತ್ತೇಜಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

ದೇಶದಲ್ಲಿನ ವಿವಿಧ ಪಿಂಚಣಿ ಯೋಜನೆಗಳ ಬಗ್ಗೆ ಸರಕಾರವು ಜನರಲ್ಲಿ ಆರ್ಥಿಕ ಜಾಗೃತಿಯನ್ನು ಮೂಡಿಸಬೇಕೆಂದು ವರದಿ ಹೇಳಿದೆ.

ಭಾರತದ ಸ್ವಯಂಪ್ರೇರಿತ ಪಿಂಚಣಿ ಯೋಜನೆಗಳು , ಭಾರತ ಪಿಂಚಣಿ ವಲಯದ ಪ್ರಗತಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.

 ಉದಾಹರಣೆಗೆ ಕೇಂದ್ರ ಸರಕಾರದ ಅಟಲ್ ಪಿಂಚಣಿ ಯೋಜನೆಗೆ 49 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ ಶೇ. 49 ಶೇ. ಮಂದಿ 1 ಸಾವಿರ ರೂ. ಹಾಗೂ ಶೇ.37 ಮಂದಿ 5 ಸಾವಿರ ರೂ. ಪಿಂಚಣಿಗೆ ಚಂದಾದಾರರಾಗಿದ್ದಾರೆ.

  ಈ ಪಿಂಚಣಿ ಮೊತ್ತವು ತೀರಾ ಕಡಿಮೆಯಾಗಿದ್ದರೂ, ಅಸಂಘಟಿತ ವಲಯದ ಬಹುತೇಕ ಮಂದಿಗೆ ಯೋಜನೆಗೆ ತಮ್ಮ ಚಂದಾ ದೇಣಿಗೆಯನ್ನು ನೀಡಲು ಸಾಧ್ಯವಾಗುತ್ತಿಲ್ಲವೆಂದು ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News