ಸೇವಾ ನ್ಯೂನತೆಯ ದೂರು ಸಲ್ಲಿಕೆ ಪ್ರಮಾಣದಲ್ಲಿ ಹೆಚ್ಚಳ
ಹೊಸದಿಲ್ಲಿ, ಮೇ 15: ದೋಷಪೂರಿತ ಮಿಕ್ಸಿ ಬದಲಿಸಿಕೊಳ್ಳಲು ನೆರವಾಗಿ, ಪಿಂಚಣಿ ದೊರೆಯಲು ವಿಳಂಬವಾಗಿದೆ. ತಕ್ಷಣ ಸರಿಪಡಿಸಿ... ಇತ್ಯಾದಿ ವೈವಿಧ್ಯಮಯ ದೂರುಗಳನ್ನು ಸಾರ್ವಜನಿಕ ದೂರು ಮತ್ತು ಪಿಂಚಣಿ ಇಲಾಖೆಗೆ ಸಲ್ಲಿಸಲಾಗುತ್ತಿದೆ. ಹಾಲಿ ವರ್ಷ 12 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲಾಗಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದಿಲ್ಲಿ ತಿಳಿಸಿದರು.
ಎನ್‌ಡಿಎ ಸರಕಾರ 2014ರ ಮೇಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರಕಾರಿ ಇಲಾಖೆಗಳ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
2012ರಲ್ಲಿ 1.75 ಲಕ್ಷ, 2013ರಲ್ಲಿ 2.09 ಲಕ್ಷ ದೂರು ದಾಖಲಾಗಿದ್ದರೆ 2014ರಲ್ಲಿ 2.74 ಲಕ್ಷ ದೂರು ದಾಖಲಾಗಿವೆ. ಇದರಲ್ಲಿ ಶೇ.97.47ರಷ್ಟು ಅಂದರೆ 2.63 ಲಕ್ಷ ದೂರುಗಳಿಗೆ 146 ದಿನಗಳಲ್ಲೇ ಪರಿಹಾರ ದೊರಕಿಸಿಕೊಡಲಾಗಿದೆ . ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ (2014ರ ಮೇ ತಿಂಗಳಿನಿಂದ) ಸಾರ್ವಜನಿಕ ದೂರು-ದುಮ್ಮಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೋದಿ ಸರಕಾರ ಕೈಗೊಂಡ ಹಲವಾರು ಜನಸ್ನೇಹೀ ಕಾರ್ಯಕ್ರಮಗಳು ಇದಕ್ಕೆ ಕಾರಣ ಎಂದು ಸಾರ್ವಜನಿಕ ದೂರು ಮತ್ತು ಪಿಂಚಣಿ ಇಲಾಖೆಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ಕೆಲವೊಂದು ಅಸಹಜ ದೂರುಗಳೂ ಸಲ್ಲಿಕೆಯಾಗಿವೆ. ತೆಲಂಗಾಣದ ನಿವಾಸಿ ವಿನೋದ್ ಕುಮಾರ್ ಎಂಬವರು ತಾನು ಆನ್‌ಲೈನ್‌ನಲ್ಲಿ ಖರೀದಿಸಿದ ಮಿಕ್ಸರ್ ಗ್ರೈಂಡರ್‌ನಲ್ಲಿ ದೋಷವಿದೆ. ಇದನ್ನು ಬದಲಿಸಲು ನೆರವಾಗುವಂತೆ ಕೋರಿದ್ದರು. ಅವರ ದೂರನ್ನು ಗ್ರಾಹಕ ವ್ಯವಹಾರ ಇಲಾಖೆಗೆ ಕಳಿಸಲಾಗಿದ್ದು ಬಳಿಕ ವಿನೋದ್‌ಗೆ ಹೊಸ ಮಿಕ್ಸಿಯನ್ನು ಬದಲಾಯಿಸಿ ಕೊಡಲಾಯಿತು ಎಂದು ಸಿಂಗ್ ತಿಳಿಸಿದರು.
2012ರಲ್ಲಿ ಗ್ರಾಹಕರ ದೂರನ್ನು ಪರಿಹರಿಸಲು ಸರಾಸರಿ 253 ದಿನ ಬೇಕಿತ್ತು. ಆದರೆ 2017ರಲ್ಲಿ ಸರಾಸರಿ 24 ದಿನಗಳಲ್ಲೇ ದೂರಿಗೆ ಪರಿಹಾರ ನೀಡಲಾಗುತ್ತಿದೆ. ಸರಕಾರದ ಸಕಾಲಿಕ ಕ್ರಮಗಳಿಂದ ಸಂತುಷ್ಟರಾಗಿರುವ ಜನತೆ ಈಗ ಸೇವಾ ನ್ಯೂನತೆಯ ಸಂದರ್ಭ ದೂರು ನೀಡಲು ಹಿಂಜರಿಯುವುದಿಲ್ಲ ಎಂದು ಸಚಿವರು ತಿಳಿಸಿದರು.