ದೇಶದ ಅರ್ಧಾಂಶದಷ್ಟು ಜನಜೀವನ ಪ್ರಾಕೃತಿಕ ವಿಕೋಪದ ಭಯದಲ್ಲಿದೆ: ರಾಜನಾಥ್

Update: 2017-05-15 16:00 GMT

   ಹೊಸದಿಲ್ಲಿ, ಮೇ 15: ವಿಶ್ವದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಗುರಿಯಾಗುವ ಸಾಧ್ಯತೆಯಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ದೇಶದ ಅರ್ಧಾಂಶದಷ್ಟು ಜನತೆ ಪ್ರಾಕೃತಿಕ ವಿಕೋಪಕ್ಕೆ ಈಡಾಗಬಲ್ಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಎಲ್ಲಾ ವಿಧದ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯ ಸರಕಾರ ಮತ್ತಿತರ ಸಂಬಂಧಪಟ್ಟ ಸಂಸ್ಥೆಗಳ ಸಹಕಾರದೊಂದಿಗೆ ರಾಷ್ಟ್ರೀಯ ಕಾರ್ಯನೀತಿಯೊಂದನ್ನು ಕೇಂದ್ರ ಸರಕಾರ ರೂಪಿಸಲಿದೆ . ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಪತ್ತು ಅಪಾಯ ಕಡಿಮೆಗೊಳಿಸಲು ರಾಷ್ಟ್ರೀಯ ವೇದಿಕೆಯೊಂದನ್ನು ಸ್ಥಾಪಿಸಲಾಗುವುದು ಎಂದರು.

  1999ರಲ್ಲಿ ಒಡಿಸಾದಲ್ಲಿ ಸಂಭವಿಸಿದ ಮಹಾ ಚಂಡಮಾರುತದಲ್ಲಿ 10000 ಜನರು ಬಲಿಯಾಗಿದ್ದರು. 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು 2004ರಲ್ಲಿ ಸಂಭವಿಸಿದ ಸುನಾಮಿ ದುರಂತದಿಂದ ದೇಶವು ಪಾಠ ಕಲಿತಿದ್ದು ವಿಪತ್ತು ಸಮಸ್ಯೆ ನಿರ್ವಹಣೆಯಲ್ಲಿ ಗಣನೀಯ ಬದಲಾವಣೆ ಮಾಡಿಕೊಳ್ಳಲಾಗಿದೆ. ಪ್ರಾಕೃತಿಕ ವಿಕೋಪದ (ವಿಪತ್ತು) ನಿರ್ವಹಣೆಯನ್ನು ಯೋಜಿತ ಕ್ರಮದಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.

ರಾಜ್ಯ ಸರಕಾರಗಳ ಸಚಿವರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಉನ್ನತ ಸರಕಾರಿ ಮತ್ತು ಪೊಲೀಸ್ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News