×
Ad

​ಪಿಎಸ್‌ಐ ಶ್ರೀಕಲಾ ಇಲಾಖೆಗೆ ಮತ್ತೆ ಸೇರ್ಪಡೆಗೊಂಡರೆ ಉಗ್ರ ಹೋರಾಟ: ದಲಿತ ಸಮಿತಿ ಎಚ್ಚರಿಕೆ

Update: 2017-05-15 21:57 IST

ಮಂಗಳೂರು, ಮೇ 15: ಅಮಾನತುಗೊಂಡಿರುವ ಕೊಣಾಜೆ ಪಿಎಸ್‌ಐ ಶ್ರೀಕಲಾ ರಾಜಕೀಯ ಪ್ರಭಾವ ಬಳಸಿ ಪೊಲೀಸ್ ಇಲಾಖೆಗೆ ಮತ್ತೆ ಸೇರ್ಪಡೆಗೊಂಡರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಎಚ್ಚರಿಸಿದೆ.

ಶ್ರೀಕಲಾ ಅವರು ರಾಜಕೀಯ ಪ್ರಭಾವದಿಂದ ಮತ್ತೆ ಇಲಾಖೆಗೆ ಸೇರ್ಪಡೆಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಅಮಾಯಕರ ಜೀವನದ ಜತೆ ಚೆಲ್ಲಾಟವಾಡಿರುವ ಶ್ರೀಕಲಾ ಅವರು ಮತ್ತೆ ಜಿಲ್ಲೆಗೆ ಬಂದರೆ ಹೋರಾಟ ನಡೆಸಲಾಗುವುದು. ಶ್ರೀಕಲಾ ವಿರುದ್ಧ ಏಳು ಪ್ರಕರಣಗಳ ಮರು ತನಿಖೆ ನಡೆಯುತ್ತಿದ್ದು, ಪ್ರಗತಿಯಲ್ಲಿ ಸಾಗುತ್ತಿದೆ. ಈ ಹಂತದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ನಾವು ಬಿಡುವುದಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರಾದ ಆಹಾರ ಸಚಿವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಶ್ರೀಕಲಾ ಅವರು ಮತ್ತೆ ಜಿಲ್ಲೆಗೆ ಬರುವಲ್ಲಿ ರಾಜಕೀಯ ಪ್ರಭಾವ ನಡೆದರೆ ಸಂಬಂಧಿಸಿದ ರಾಜಕಾರಣಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಮುಖಂಡ ರಘುವೀರ್ ಸೂಟರ್‌ಪೇಟೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಂಬಂಧ ಈಗಾಗಲೇ ಗೃಹ ಸಚಿವರಿಗೆ ದೂರು ನೀಡಲಾಗಿದೆ. ಶ್ರೀಕಲಾ ಅವರಿಂದ ಅನ್ಯಾಯಕ್ಕೆ ಒಳಗಾದರು ನಗರ ಪೊಲೀಸ್ ಆಯುಕ್ತರು ಅಥವಾ ನಮ್ಮ ಸಂಘಟನೆಗೆ ದೂರು ನೀಡಬಹುದು ಎಂದರು.

ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮುಖಂಡರಾದ ನಿರ್ಮಲ್ ಕುಮಾರ್, ಅಶೋಕ್ ಕೊಂಚಾಡಿ, ರಮೇಶ್ ಕೋಟ್ಯಾನ್, ಯಶೋಧ ಹೊಸಬೆಟ್ಟು, ಸುರೇಶ್ ಭಟ್ ಬಾಕ್ರಬೈಲು, ಜಗದೀಶ ಪಾಂಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News